2ಜಿ ತರಂಗಗುಚ್ಛ ಹಂಚಿಕೆ ಹಗರಣ: ವಿಚಾರಣೆ ಅಕ್ಟೋಬರ್ 25ಕ್ಕೆ ಮುಂದೂಡಿಕೆ

ಹೊಸದಿಲ್ಲಿ, ಸೆ. 20: 2ಜಿ ತರಂಗಗುಚ್ಛ ಹಂಚಿಕೆ ಪ್ರಕರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜ, ಡಿಎಂಕೆ ರಾಜ್ಯಸಭಾ ಸದಸ್ಯೆ ಕಣಿಮೋಳಿ ಹಾಗೂ ಇತರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಅಗಾಧ ಪ್ರಮಾಣದಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸಲಾಗಿದ್ದು ಇದರ ಪರಿಶೀಲನಾ ಕಾರ್ಯ ಇನ್ನೂ ಸಾಗುತ್ತಿರುವುದನ್ನು ಗಮನಿಸಿ ವಿಚಾರಣೆ ಮುಂದೂಡಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ತಿಳಿಸಿದ್ದಾರೆ.
ದಾಖಲೆ ಪತ್ರಗಳ ಪರಿಶೀಲನೆಗೆ ಬಹಳಷ್ಟು ಸಮಯದ ಅಗತ್ಯವಿರುವ ಕಾರಣ ಅಕ್ಟೋಬರ್ 25ರಂದು ಮುಂದಿನ ವಿಚಾರಣೆ ನಡೆಯಲಿದೆ. ಈ ಸಂದರ್ಭ ತೀರ್ಪು ನೀಡುವ ದಿನಾಂಕವನ್ನು ನಿಗದಿಗೊಳಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
2ಜಿ ತರಂಗಗುಚ್ಛ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಬಿಐ ಹಾಗೂ ಇ.ಡಿ.(ಜಾರಿ ನಿರ್ದೇಶನಾಲಯ) ಈ ಪ್ರಕರಣಗಳ ತನಿಖೆ ನಡೆಸಿದೆ.
ಮಾಜಿ ಸಚಿವ ರಾಜ ಅವರು 2ಜಿ ತರಂಗಗುಚ್ಛಗಳ ಹಂಚಿಕೆ ಪ್ರಕರಣದಲ್ಲಿ ಪಕ್ಷಪಾತ ತೋರಿದ್ದು ಇದರಿಂದ ಸರಕಾರದ ಖಜಾನೆಗೆ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ. ಸ್ವಾನ್ ಟೆಲಿಕಾಂ ಸಂಸ್ಥೆಗೆ 2ಜಿ ತರಂಗಗುಚ್ಛಗಳನ್ನು ಹಂಚಲಾಗಿದ್ದು ಈ ಪ್ರಕರಣದಲ್ಲಿ ಕಲೈನಗರ್ ಟಿವಿಗೆ ಲಂಚದ ರೂಪದಲ್ಲಿ 200 ಕೋಟಿ ರೂ. ಸಂದಾಯವಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ, ಕಣಿಮೋಳ್, ಡಿಎಂಕೆ ಪರಮೋಚ್ಛ ಮುಖಂಡ ಎಂ.ಕರುಣಾನಿಧಿಯವರ ಪತ್ನಿ ದಯಾಳು ಅಮ್ಮಾಳ್ ಅವರು ಸೇರಿಕೊಂಡು ಹಣಚಲುವೆ ಪ್ರಕ್ರಿಯೆಯ ಒಳಸಂಚು ಹೂಡಿದ್ದರು ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.







