ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮಾಹಿತಿಗಾಗಿ ಕರಪತ್ರ ಹಂಚುತ್ತಿರುವ ಪೊಲೀಸರು

ಬೆಂಗಳೂರು, ಸೆ.20: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಸಿಟ್ ಅಧಿಕಾರಿಗಳು, ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬಾಡಿಗೆದಾರರು ಜಾಗ ಖಾಲಿ ಮಾಡಿರುವ ಬಗ್ಗೆ ಮಾಹಿತಿ ಪಡೆಯಲು ಕರ ಪತ್ರ ಹಂಚುತ್ತಿದ್ದಾರೆ.
ಗೌರಿ ಲಂಕೇಶ್ ಹತ್ಯೆಯ ಬಳಿಕ ಮನೆ ಖಾಲಿ ಮಾಡಿದವರು ಮತ್ತು ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡಿದವರ ವಿವರಗಳನ್ನೂ ಸಂಗ್ರಹಿಸುತ್ತಿದೆ. ಕರಪತ್ರ ಮುದ್ರಿಸಿ ಮನೆ, ಲಾಡ್ಜ್ ಮಾಲಕರಿಗೆ ನೀಡಿ ವಿವರ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.
ಪೊಲೀಸ್ ಇ-ಮೇಲ್, ಮೊಬೈಲ್ ಸಂಖ್ಯೆ ಇರುವ ಕರಪತ್ರ ಮುದ್ರಿಸಿರುವ ಸಿಟ್ ತಂಡ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದೆ.
ಸುಮಾರು 22 ಸಾವಿರ ಪಾಂಪ್ಲೆಟ್ ಮುದ್ರಿಸಿ ಹಂಚಿರುವ ಪೊಲೀಸರು ಅಪಾರ್ಟ್‌ಮೆಂಟ್‌ಗಳು, ಬಾಡಿಗೆ ಮನೆಗಳು, ಹೊಟೇಲ್, ಲಾಡ್ಜ್, ಪಿಜಿಗಳು, ಹಾಸ್ಟೆಲ್, ರೆಸಾರ್ಟ್, ದೇವಾಲಯಗಳ ವಸತಿ ಗೃಹಗಳು ಹಾಗೂ ಧಾರ್ಮಿಕ ವಸತಿ ಗೃಹಗಳಲ್ಲಿ ಖಾಲಿ ಮಾಡಿಕೊಂಡು ಹೋಗಿರುವವರ ಮಾಹಿತಿ ನೀಡಲು ಸೂಚಿಸಿದೆ.
ವಿಕೃತ ಸ್ಟೇಟಸ್: ಗೌರಿ ಲಂಕೇಶ್ ಅವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಟ್ವೀಟರ್‌ನಲ್ಲಿ ವಿಕೃತ ಸ್ಟೇಟಸ್ ಹಾಕಿದವರನ್ನು ಸಿಟ್ ತನಿಖಾಧಿಕಾರಿಗಳ ತಂಡ ವಿಚಾರಣೆ ನಡೆಸಿದೆ.







