ಗೌರಿ ಲಂಕೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದವರ ವಿಚಾರಣೆ

ಬೆಂಗಳೂರು, ಸೆ.20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಗೌರಿ ಲಂಕೇಶ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ವ್ಯಕ್ತಿಗಳನ್ನು ಸಿಟ್ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಬುಧವಾರ ಇಲ್ಲಿನ ಆರ್‌ಟಿ ನಗರದ ಜ್ಯೋತಿಷಿ ದ್ವಾರಕನಾಥ್ ಗುರೂಜಿ ಅವರ ನಿವಾಸಕ್ಕೆ ಸಿಟ್‌ನ ಎಸಿಪಿ, ಇನ್ ಸ್ಪೆಕ್ಟರ್ ನೇತೃತ್ವದ ನಾಲ್ವರು ಸಿಬ್ಬಂದಿ ಭೇಟಿ ನೀಡಿ ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದರು.
ಈ ಹಿಂದೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಜ್ಯೋತಿಷಿ ದ್ವಾರಕನಾಥ್ ಗುರೂಜಿ ವಿರುದ್ಧ ವರದಿಯೊಂದನ್ನು ಗೌರಿ ಲಂಕೇಶ್ ಪ್ರಕಟಿಸಿದ್ದರು. ಬಳಿಕ ಗುರೂಜಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಟ್ ತಂಡ ಅವರನ್ನು ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ.
ಕರವೇ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಸಿಟ್ ತನಿಖಾಧಿಕಾರಿಗಳು ವಿಚಾರಣೆ ನಡೆಸಿದರು. 2010ರಲ್ಲಿ ಗೌರಿ ಲಂಕೇಶ್ ತಮ್ಮ ಸಂಘಟನೆಯ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿ ವರದಿಯೊಂದನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನಾರಾಯಣಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, ತದನಂತರ ವಿಚಾರಣೆಗೆ ಹಾಜರಾಗದ ಕಾರಣ ಪ್ರಕರಣ ವಜಾಗೊಂಡಿತ್ತು.





