ಅಹೋರಾತ್ರಿ ಧರಣಿ ಕೈಬಿಟ್ಟ ಸಂಸದ ಪಿ.ಕರುಣಾಕರನ್
ನೀಲೇಶ್ವರ ಪಳ್ಳಿಕೆರೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಿಸುವ ಭರವಸೆ

ಕಾಸರಗೋಡು,ಸೆ.20 : ನೀಲೇಶ್ವರ ಪಳ್ಳಿಕೆರೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಆರಂಭಿಸಲು ಅಧಿಕಾರಿಗಳು ಭರವಸೆ ನೀಡಿದ್ದು , ಇದರಿಂದ ಕಾಸರಗೋಡು ಸಂಸದ ಪಿ.ಕರುಣಾಕರನ್ ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ.
ಬುಧವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಅಧಿಕಾರಿಗಳ ಸಭೆಯಲ್ಲಿ ಭರವಸೆ ನೀಡಲಾಗಿದೆ.
ಮೇಲ್ಸೇತುವೆಗೆ ಟೆಂಡರ್ ಪ್ರಕ್ರಿಯೆ ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಶೀಘ್ರ ಕಾಮಗಾರಿ ಆರಂಭಿಸಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪೂರ್ಣಗೊಳ್ಳದಿದ್ದರೂ ಮೂರು ರಸ್ತೆಗಿರುವ ಅಗಲದಲ್ಲಿ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಜನರಲ್ ಮೆನೇಜರ್ ಆಶಿಶ್ ದ್ವಿವೇದಿ ತಿಳಿಸಿದರು.
ಈ ಕುರಿತ ಸಲಹೆಯನ್ನು ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಅಂಗೀಕಾರಕ್ಕೆ ಕಳುಹಿಸಲಾಗಿದೆ. ಅಂಗೀಕಾರ ಲಭಿಸಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಅವಧಿಗೆ ಮುಂಚಿತವಾಗಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್ ,ಲೋಕೋಪಯೋಗಿ ಸಚಿವ ಜಿ.ಸುಧಾಕರನ್, ಉದುಮ ಶಾಸಕ ಕೆ.ಕುಞ ರಾಮನ್, ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ ಬಿಜು ಪ್ರಭಾಕರನ್ , ರಾಷ್ಟ್ರೀಯ ಹೆದ್ದಾರಿ ಇಲಾಖಾ ಎಂಜಿನಿಯರ್ ಪಿ. ಪ್ರಭಾಕರನ್, ಹೋರಾಟ ಸಹಾಯ ಸಮಿತಿ ಪ್ರತಿನಿಧಿಗಳಾದ ಎಂ.ವಿ ಬಾಲಕೃಷ್ಣನ್, ಡಾ .ವಿ.ಪಿ.ಪಿ ಮುಸ್ತಫಾ, ಕೆ.ಪಿ ಜಯರಾಜನ್ ಮೊದಲಾದವರು ಉಪಸ್ಥಿತರಿದ್ದರು .







