ಪ್ರಜಾಪ್ರಭುತ್ವದ ರಕ್ಷಣೆ ಸಾಹಿತ್ಯದ ಮೂಲಕ ಆಗಲಿ: ಸಚಿವ ಮಹದೇವಪ್ಪ
ಮೈಸೂರು, ಸೆ.20: ಪ್ರಜಾಪ್ರಭುತ್ವದ ರಕ್ಷಣೆ ಸಾಹಿತ್ಯದ ಮೂಲಕ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ನಡೆದ ನಾಡೋಜ ಡಾ.ಕೆ.ಎಸ್.ನಿಸಾರ್ ಅಹ್ಮದ್ ಅವರ ಆಯ್ದ ಕವಿತೆಗಳ “ಸೀಮಾತೀತನ ಸಿರಿವಂತ ಸುಗ್ಗಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದೊಂದು ಸಾಹಿತ್ಯ ಕ್ಷೇತ್ರದ ಎತ್ತರವಾದ ಕಾರ್ಯಕ್ರಮ. ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರ ಕನ್ನಡದ ಅಭಿಮಾನಕ್ಕೆ ನಿದರ್ಶನವೆಂದರೆ, 2006ರಲ್ಲಿ ಶಿವಮೊಗ್ಗದಲ್ಲಿ ನಡೆದ 72ನೆ ಕನ್ನಡ ಸಾಹಿತ್ಯ ಸಮ್ಮೇಳನ. ಅಲ್ಲಿ ಅವರು ಮಾತನಾಡುತ್ತ ನಾನು ಯಾವ ಪಂಚತಾರ ಪಂಗಡಕ್ಕೆ ಸೇರಿದವನಲ್ಲ. ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಬರೆದಿದ್ದರೆ ಇಷ್ಟೊಂದು ಗೌರವ ಸಿಗುತ್ತಿರಲಿಲ್ಲ ಎಂದಿದ್ದರು. ಕನ್ನಡ ನಾಡು, ಭಾಷೆ, ಜನ, ನೆಲ, ಜಲವನ್ನು ಪ್ರೀತಿಸುತ್ತಿದ್ದ ಹಾಗೂ ಎಲ್ಲವನ್ನೂ ಮೀರಿದ ಮೇರು ಮಾನವತಾವಾದಿ ಇವರು. ಇಂತಹ ಮಹಾನ್ ಕವಿ ನಮ್ಮ ಮುಂದೆ ಸೀಮಾತೀತನ ಸಿರಿವಂತ ಸುಗ್ಗಿ ಕೃತಿಯನ್ನು ಸಮಾಜಕ್ಕೆ ನೀಡುವ ಮೂಲಕ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಹಾಗೂ ಜಾತಿ-ಧರ್ಮ, ಪಂಥ, ಬಿಟ್ಟು ಒಂದು ಅಜೆಂಡವಿಟ್ಟುಕೊಂಡು ಸಮ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಡಾ. ಕೆ.ಎಸ್. ನಿಸಾರ್ ಅಹ್ಮದ್ ಅವರ ಸೀಮಾತೀತನ ಸಿರಿವಂತ ಸುಗ್ಗಿ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಅವರು ಲೋಕಾರ್ಪಣೆಗೊಳಿಸಿದರು. ಹಾಗೂ ಇದೇ ಸಂದರ್ಭ ಕವಿ ನಿಸಾರ್ ಅಹ್ಮದ್ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಶಾಸಕ ವಾಸು, ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಸಕ ಟಿ.ಎಸ್.ಛಾಯಾಪತಿ ಉಪಸ್ಥಿತರಿದ್ದರು.







