ದೇಯಿ ಬೈದೆತಿ ಔಷಧಿ ವನಕ್ಕೆ ಸಚಿವ ರಮಾನಾಥ ರೈ ಭೇಟಿ

ಪುತ್ತೂರು,ಸೆ.20: ದೇಯಿ ಬೈದೆತಿ ಔಷಧಿ ವನ ನಿರ್ಮಾಣವು ಯಾರದೇ ಮನವಿಯಿಲ್ಲದೆ ನನ್ನಲ್ಲೇ ಮೂಡಿದ ಯೋಚನೆ ಹಾಗೂ ದೈವ ಪ್ರೇರಣೆಯಿಂದ ನಿರ್ಮಿಸಿರುವುದಾಗಿದೆ. ವನದ ಮಧ್ಯೆ ಇರಿಸಲಾದ ಮೂರ್ತಿ ಕಲಾವಿದನ ಪರಿಕಲ್ಪನೆಯಲ್ಲಿ ಮೂಡಿದ ಒಂದು ಕಲಾಕೃತಿ. ಈ ಕಲಾಕೃತಿ ಒಂದು ಜನಪದೀಯ ಶೈಲಿಯಲ್ಲಿ ಮೂಡಿ ಬಂದಿದೆ. ಆ ಪ್ರತಿಮೆಗೆ ಅವಮಾನ ಮಾಡಿದ ಅಹಿತರ ಘಟನೆಯೊಂದು ನಡೆದು ಹೋಗಿದೆ. ಅದು ಖಂಡನೀಯ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಬುಧವಾರ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪಿನಡ್ಕದಲ್ಲಿರುವ ದೇಯಿ ಬೈದ್ಯೆತಿ ಔಷಧಿ ವನಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಸಚಿವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಅದನ್ನು ತಪ್ಪು ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ನಾವೆಲ್ಲ ಬಲವಾಗಿ ಖಂಡಿಸುತ್ತೇವೆ. ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಾನೂನು ಪ್ರಕಾರ ಮುಂದಿನ ವಿಧಾನಗಳು ನಡೆಯುತ್ತವೆ. ಆದರೆ ಈ ಘಟನೆಯ ಹೆಸರಿನಲ್ಲಿ ಜಿಲ್ಲೆ ಸಾಮರಸ್ಯ ಕದಡುವಂಥ ಘಟನೆ ಆಗಬಾರದು.
ಕೋಟಿ ಚೆನ್ನಯರು ದಮನಿತರ ಪರ ಹೋರಾಡಿದವರು. ಸಮಾಜವನ್ನು ಬೆಸೆದವರು ಎಂದು ಹೇಳಿದ ಸಚಿವ ರೈ, ಇತ್ತೀಚಿನ ಘಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಪನಂಬಿಕೆ ಮೂಡಿಸುವ ಕೆಲಸ ನಡೆಯದಿರಲಿ. ಅದು ಕೋಟಿ ಚೆನ್ನಯರ ಆದರ್ಶಕ್ಕೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾದುದು. ಯಾರೂ ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬಾರದು ಎಂದು ಸಚಿವರು ಮನವಿ ಮಾಡಿದರು.
ಕೋಟಿ ಚೆನ್ನಯರ ತಾಯಿ, ಮಹಾಮಾತೆ ದೇಯಿ ಬೈದ್ಯೆತಿ ಹೆಸರಿನಲ್ಲಿ ರಾಜ್ಯ ಸರಕಾರ ನಿರ್ಮಿಸಿದ ಔಷಧಿ ವನದ ಮೊದಲ ಹಂತದ ಅಭಿವೃದ್ಧಿ ಮುಗಿದಿದ್ದು, ಕೆಲವೇ ದಿನಗಳಲ್ಲಿ ಎರಡನೇ ಹಂತದ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಎರಡನೇ ಹಂತದ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಮಗ್ರ ಯೋಜನಾ ವರದಿ ಸಿದ್ಧವಾಗಲಿದೆ. ಅದರ ಬೆನ್ನಲ್ಲೇ ಇಲಾಖಾ ಅನುಮತಿ ನೀಡಿ ಕಾಮಗಾರಿ ಆರಂಭಿಸಲಾಗುತ್ತದೆ. ಯೋಜನಾ ವರದಿ ಸಿದ್ಧಗೊಂಡಾಗ ಅನುದಾನ ಮೊತ್ತದ ವಿವರ ಸಿಗಲಿದೆ. ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಇತ್ತೀಚೆಗೆ ಕೆಲವು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ದೇಯಿ ಬೈದ್ಯೆತಿ ಮೂರ್ತಿಯನ್ನು ಶುದ್ಧೀಕರಣ ಮಾಡಲು ಹೊರಟಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದರ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲಾರೆ. ಅವರು ಶುದ್ಧೀಕರಣ, ಅಭಿಷೇಕ ಮಾಡುವಾಗ ಅವರ ಮನಸ್ಸಿನಲ್ಲಿ ಏನಿತ್ತು? ಅವರ ಉದ್ದೇಶ ಏನು ಎಂಬುದನ್ನು ಜನರ ವಿವೇಚನೆಗೆ ಬಿಡುತ್ತೇನೆ. ನಾನು ಏನೂ ಹೇಳುವುದಿಲ್ಲ. ಮಾತೆ ದೇಯಿ ಬೈದ್ಯೆತಿ ಒಬ್ಬರು ಮಹಾನ್ ವೈದ್ಯ ಪಂಡಿತೆ. ಅವರ ಗರ್ಭ ಸಂಜಾತರಾದ ಕೋಟಿ ಚೆನ್ನಯರು ಅತುಲ ಪರಾಕ್ರಿಮಿಗಳು. ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡಿದವರು. ಅವರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ ಎಂದರು.
ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತಾಗಲು ಔಷಧ ವನದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು. ಮೂರ್ತಿ ಇರುವ ಕುಟೀರದ ಆವರಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಎರಡನೇ ಹಂತದ ಅಭಿವೃದ್ಧಿ ಆಗುತ್ತಲೇ ಪ್ರವಾಸಿಗರಿಂದ ಸಾಂಕೇತಿಕ ಶುಲ್ಕ ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಇದರ ಸಂರಕ್ಷಣೆಗೆ ಸ್ಥಳೀಯರ ಸಮಿತಿಯನ್ನೂ ರಚಿಸುವ ಯೋಚನೆ ಇದೆ. ಇದೊಂದು ಔಷಧಿ ವನ. ಅಂದರೆ ಸಸ್ಯ ಸಂಪತ್ತು. ಕಾಡು ಎಂಬುದು ಪ್ರಕೃತಿಯ ಮುಕ್ತ ಖಜಾನೆ. ಜನ ಅದನ್ನು ಅದೇ ಗೌರವದಿಂದ ಕಾಣಬೇಕಾಗುತ್ತದೆ ಎಂದು ಹೇಳಿದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ, ಜಿಪಂ ಸದಸ್ಯ ಅನಿತಾ ಹೇಮನಾಥ ಶೆಟ್ಟಿ, ತಾಪಂ ಸದಸ್ಯೆ ಉಷಾ ಅಂಚನ್, ನಾನಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹಮ್ಮದ್ ಬಡಗನ್ನೂರು, ಮುರಳೀಧರ ರೈ, ಮಾಯಿಲಪ್ಪ ಸಾಲಿಯಾನ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕ್ಕಳ, ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಡಿಸಿಎಫ್ ಡಾ.ಕರಿಕ್ಕಳನ್, ಪುತ್ತೂರು ಉಪ ವಿಭಾಗದ ಎಸಿಎಫ್ ಸುಬ್ರಹ್ಮಣ್ಯ ರಾವ್, ಪುತ್ತೂರು ಆರ್‍ಎಫ್‍ಒ ಕಾರ್ಯಪ್ಪ, ಸುಬ್ರಹ್ಮಣ್ಯ ಆರ್‍ಎಫ್‍ಒ ತ್ಯಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಔಷಧಿ ವನಕ್ಕೆ ಭೇಟಿ ನೀಡಿದ ಸಚಿವ ರಮಾನಾಥ ರೈ ಅವರು ಬಳಿಕ ದೇಯಿ ಬೈದೆತಿ - ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‍ಲ್‍ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರ ಮುಖಂಡರು ಜತೆಗಿದ್ದರು. ಕ್ಷೇತ್ರದ ಪರವಾಗಿ ಸಚಿವರನ್ನು ಗೌರವಿಸಲಾಯಿತು. ಇದೇ ವೇಳೆ ಸಚಿವರು ಪಡುಮಲೆಯ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಮತ್ತು ಪಡುಮಲೆ ಮಸೀದಿಗೆ ಭೇಟಿ ನೀಡಿದರು.







