ತೈಲದ ಹೆಚ್ಚಳ ಬೆಲೆಯಿಂದ ಬುಲೆಟ್ ಟ್ರೈನ್‌ನ ಸಾಲದ ಬಡ್ಡಿ ಪಾವತಿಸಬಹುದು: ಶಿವಸೇನೆ

ಮುಂಬೈ, ಸೆ. 20: ತೈಲ ಬೆಲೆ ಹೆಚ್ಚಳದ ಬಗ್ಗೆ ಮತ್ತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಜಾಗತಿಕ ಕಚ್ಚಾ ತೈಲ ಬೆಲೆಯ ಬೆಲೆ ಕಡಿಮೆ ಇದ್ದ ಹೊರತಾಗಿಯೂ ತೈಲ ಬೆಲೆ ಹೆಚ್ಚಿದ್ದರೆ, ಬುಲೆಟ್ ಟ್ರೈನ್‌ಗಾಗಿ ಜಪಾನ್‌ನಿಂದ ತೆಗೆದುಕೊಂಡ ಸಾಲದ ಬಡ್ಡಿ ಪಾವತಿಸಬಹುದು ಎಂದಿದೆ.
ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಎನ್‌ಡಿಎಯ ಮಿತ್ರ ಪಕ್ಷವಾಗಿರುವ ಶಿವಸೇನೆ, ದೇಶದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ತೈಲ ಬೆಲೆಯ ಹೆಚ್ಚಳ ಮುಖ್ಯ ಕಾರಣ ಎಂದಿದೆ.
ಹಣದುಬ್ಬರದ ಬಗ್ಗೆ ಮಾತನಾಡಲು ಸರಕಾರದಲ್ಲಿರುವವರು ಸಿದ್ಧರಿಲ್ಲ. ಈ ವಿಚಾರವನ್ನು ಇತರರು ಮಾತನಾಡುವುದನ್ನು ಕೂಡ ಅವರು ಬಯಸುವುದಿಲ್ಲ. ತೈಲ ಬೆಲೆ ಗಗನಕ್ಕೇರಿರುವುದರಿಂದ ಸಾಮಾನ್ಯ ಮನುಷ್ಯ ತೀವ್ರ ತೊಂದರೆಗೆ ಒಳಗಾಗಿದ್ದಾನೆ. ಕಳೆದ 4 ತಿಂಗಳಲ್ಲಿ 20 ಬಾರಿ ಏರಿಕೆಯಾದ ತೈಲ ಬೆಲೆಗೆ ಸರಕಾರದಲ್ಲಿರುವವರು ಬೆಂಬಲಿಸಿದರೆ, ಅದು ಸರಿ ಅಲ್ಲ ಎಂದು ಸೇನಾ ಮುಖವಾಣಿ ಸಾಮ್ನಾ ಹೇಳಿದೆ.
ಈ ಹಿಂದೆ ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸಚಿವ ಅಲ್ಫೋನ್ಸ್ಸ್ ಕಣ್ಣಂತಾನಂ ನೀಡಿದ ಹೇಳಿಕೆ ಬಡವರು ಹಾಗೂ ಮಧ್ಯಮವರ್ಗದವರನ್ನು ಅವಮಾನಿಸಿದೆ ಎಂದು ಹೇಳಿದ ಶಿವಸೇನೆ, ಅಂತಹವರು ರಾಷ್ಟ್ರ ಆಳಲು ಅರ್ಹರಲ್ಲ ಎಂದಿದೆ.





