ಬಾಲ್ಯವಿವಾಹ: ಪ್ರಕರಣ ದಾಖಲು
ಮಂಗಳೂರು, ಸೆ.20: ಅಪ್ರಾಪ್ತ ವಯಸ್ಕ ಬಾಲಕಿಗೆ ಮದುವೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿಯ ಪೋಷಕರು, ವರ ಮತ್ತು ವರನ ಪಾಲಕರ ಮೇಲೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.20 ರಂದು ಬಾಲ್ಯ ವಿವಾಹ ನಡೆದಿದ್ದು, ಈ ಬಗ್ಗೆ ಮಾಹಿತಿ ದೊರೆತು ಆ. 29ರಂದು ಬಾಲಕಿಯ ಪೋಷಕರು, ವರ ಮುಹಮ್ಮದ್ ಇಮ್ರಾನ್ ಮತ್ತು ಆತನ ಪೋಷಕರ ಮೇಲೆ ಬಾಲ್ಯವಿವಾಹ ನಿಷೇಧಾಧಿಕಾರಿಗಳಾಗಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿ ದೂರು ನೀಡಿದ್ದು, ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇವರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9, 10 ಮತ್ತು 11ರಂತೆ ಎಫ್ಐಆರ್ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017-18ನೆ ಸಾಲಿನಲ್ಲಿ 3 ಬಾಲ್ಯವಿವಾಹಗಳು ನಡೆದಿರುವ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಪ್ರಕಟನೆ ತಿಳಿಸಿದೆ.
Next Story