ಇಟ್ಟಿಗೆ ಗೂಡುಗಳಲ್ಲಿ ಜೀತಪದ್ಧತಿ: ಎನ್‌ಜಿಒ

ಹೊಸದಿಲ್ಲಿ, ಸೆ. 20: ಲಕ್ಷಗಟ್ಟಲೆ ಇಟ್ಟಿಗೆ ಕೆಲಸಗಾರರು ಜೀತ ಕಾರ್ಮಿಕರಾಗಿದ್ದಾರೆ. ಅವರ ಕೂಲಿಯನ್ನು ನಿರಂತರ ವಂಚಿಸಲಾಗುತ್ತಿದೆ ಎಂದು ಬುಧವಾರ ಹೇಳಿರುವ ಜೀತಪದ್ಧತಿ ವಿರೋಧಿ ಗುಂಪು, ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಭಾರತಾದ್ಯಂತ ಇರುವ ಸಾವಿರಾರು ಇಟ್ಟಿಗೆ ಗೂಡುಗಳಲ್ಲಿ ಜೀವಕ್ಕೇ ಮಾರಕವಾದ ಮಾಲಿನ್ಯ ಹಾಗೂ ತೀವ್ರ ಉಷ್ಣತೆಯ ಮಧ್ಯೆ ಕೋಟಿಗಟ್ಟಲೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪಂಜಾಬ್‌ನ ಆ್ಯಂಟಿ ಸ್ಲೇವರಿ ಇಂಟರ್‌ನ್ಯಾಶನಲ್‌ನ ದತ್ತಾಂಶ ತಿಳಿಸಿದೆ.
ಮಾಡಿದ ಇಟ್ಟಿಗೆ ಸಂಖ್ಯೆ ಆಧರಿಸಿ ಕೂಲಿ ನೀಡುತ್ತಿರುವುದರಿಂದ ಸುಧಾರಣೆಯಾದ ಕುಟುಂಬಗಳು ಕೂಡ ಕೆಲವೊಮ್ಮೆ ಬಲವಂತವಾಗಿ ಈ ಕೆಲಸಗಳಿಗೆ ತಮ್ಮ ಮಕ್ಕಳನ್ನು ದೂಡುತ್ತಿದ್ದಾರೆ. ಬೇಸಗೆಯ ತಿಂಗಳ ಉರಿ ಬಿಸಿಲಲ್ಲಿ 14 ವರ್ಷಕ್ಕಿಂತ ಕೆಳಗಿನ ಶೇ. 65ರಿಂದ 80 ಮಕ್ಕಳು 9 ಗಂಟೆಗಳ ಕಾಲ ಈ ಇಟ್ಟಿಗೆಯ ಗೂಡಿನಲ್ಲಿ ದುಡಿಯುತ್ತಿದ್ದಾರೆ ಎಂದು ವರದಿ ಹೇಳಿದೆ.
ಶಾಲೆಗೆ ಹೋಗುವ ಬದಲು ಇಟ್ಟಿಗೆ ಗೂಡುಗಳಲ್ಲಿ ಪ್ರತಿದಿನ 9 ಗಂಟೆಗಳ ಕಾಲ ಈ ಜೀತ ಕಾರ್ಮಿಕರು, ಮಕ್ಕಳು ಹಾಗೂ ಬಾಲಕ-ಬಾಲಕಿಯರು ದುಡಿಯುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಈ ಗುಂಪಿನ ಏಶ್ಯಾ ಮ್ಯಾನೇಜರ್ ಸಾರಾ ವೌಂಟ್ ಹೇಳಿದ್ದಾರೆ.







