ಆರ್ಥಿಕತೆ ಸುಧಾರಿಸಲು ಹೆಚ್ಚುವರಿ ಕ್ರಮ: ಜೇಟ್ಲಿ

ಹೊಸದಿಲ್ಲಿ, ಸೆ. 20: ಪ್ರಸಕ್ತ ವಿತ್ತ ವರ್ಷದ ತ್ರೈಮಾಸಿಕದಲ್ಲಿ ಕಳೆದ ಮೂರು ವರ್ಷದಲ್ಲೇ ಅತೀ ಕಡಿಮೆ ಶೇ. 5.7ಕ್ಕೆ ಇಳಿಕೆಯಾಗಿರುವ ಆರ್ಥಿಕತೆಯನ್ನು ಉತ್ತಮಪಡಿಸಲು ಹೆಚ್ಚುವರಿ ಕ್ರಮಗಳನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಿ ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಲಭ್ಯವಿರುವ ಎಲ್ಲ ಆರ್ಥಿಕ ಸೂಚಕಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ. ಅಗತ್ಯವಿದ್ದರೆ ಸರಕಾರ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಿದೆ. ಅದಕ್ಕಿಂತ ಮುನ್ನ ನಾನು ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ನಾವು ನಿರ್ಧರಿಸಿದ ಬಳಿಕ ನಿಮಗೆ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಇದು ಶೀಘ್ರ ಕಾರ್ಯ ನಿರ್ವಹಣೆಯ ಸರಕಾರ ಹಾಗೂ ಪರಿಸ್ಥಿತಿ ಬಯಸಿದರೆ ನಾವು ಪ್ರತಿಕ್ರಿಯಿಸಲಿದ್ದೇವೆ. ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸುಧಾರಣಾ ಕಾರ್ಯಸೂಚಿಯಲ್ಲಿ ಮುಂದುವರಿಯುತ್ತಿದ್ದೇವೆ ಎಂದು ಜೇಟ್ಲಿ ಹೇಳಿದರು.





