ಸುರತ್ಕಲ್ ಟೋಲ್ ವಿರುದ್ಧ ಪ್ರತಿಭಟನೆ

ಮಂಗಳೂರು, ಸೆ.21: ಸುರತ್ಕಲ್ ನಲ್ಲಿ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್ ಕೇಂದ್ರವನ್ನು ಮುಚ್ಚಬೇಕು ಮತ್ತು ಕೂಳೂರು, ಪಣಂಬೂರು, ಬೈಕಂಪಾಡಿ, ಸುರತ್ಕಲ್ ಹಾದುಹೋಗುವ ಹೆದ್ದಾರಿಯನ್ನು ದುರಸ್ಥಿಪಡಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್‌ಗೇಟ್‌ಗಳ ನಡುವೆ ಕನಿಷ್ಠ 50 ಕಿ.ಮೀ. ಅಂತರ ಇರಬೇಕು. ಆದರೆ 10 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿರುವ ಹೆಜಮಾಡಿ ಹಾಗೂ ಸುರತ್ಕಲ್ಗಳಲ್ಲಿ ಎರಡು ಟೋಲ್‌ಗೇಟ್‌ಗಳು ಸುಂಕ ವಸೂಲಿ ಮಾಡುತ್ತಿವೆ. ಇಂತಹ ಉದಾಹರಣೆ ಬೇರೆಲ್ಲೂ ಇಲ್ಲ. ಕಡಿಮೆ ಅಂತರದಲ್ಲಿ ಎರಡು ಕಡೆ ಸುಂಕ ವಸೂಲಿ ಮಾಡುತ್ತಿರುವುದು ಜನಸಾಮಾನ್ಯರ ಪಾಲಿಗೆ ಹೆಚ್ಚುವರಿ ಹೊರೆಯಾಗಿದೆ. ಆದ್ದರಿಂದ ಸುರತ್ಕಲ್ನ ಟೋಲ್ಗೇಟ್‌ನ್ನು ಕೂಡಲೇ ಮುಚ್ಚಬೇಕು ಎಂದರು.
ದುಬಾರಿ ಸುಂಕ ವಸೂಲಿ ಮಾಡುತ್ತಿದ್ದರೂ ಹೆದ್ದಾರಿ ಪ್ರಾಧಿಕಾರವು ರಸ್ತೆಗಳ ದುರಸ್ಥಿ ಬಗ್ಗೆ ಗಮನ ಹರಿಸಿಲ್ಲ. ಹೆದ್ದಾರಿಯ ಮಾರಣಾಂತಿಕ ಗುಂಡಿಗಳು ವಾಹನ ಚಾಲಕರ ಹಾಗೂ ಪ್ರಯಾಣಿಕರ ಪಾಲಿಗೆ ಅಪಾಯಕಾರಿಯಾಗಿವೆ. ಈ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಿ ಹೆದ್ದಾರಿಯನ್ನು ದುರಸ್ಥಿಗೊಳಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಕಾರ್ಪೊರೇಟರ್‌ಗಳಾದ ರೇವತಿ ಪುತ್ರನ್, ದಯಾನಂದ ಶೆಟ್ಟಿ, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಟೋಲ್ ವಿರೋಧಿ ಹೋರಾಟ ಸಮಿತಿಯ ಶ್ರೀನಾಥ್ ಕುಲಾಲ್, ಸ್ಥಳೀಯ ಮುಖಂಡರಾದ ರಾಜೇಶ್ ಪಡ್ರೆ, ಸಿಪ್ರಿಯನ್ ಡಿಸೋಜ, ಮಹಾಬಲ ರೈ, ಸಲೀಂ ಶಾಡೊ, ಸಂತೋಷ್ ಬಜಾಲ್, ಬದ್ರುದ್ದೀನ್ ಹೆಜಮಾಡಿ, ವಿಶ್ವನಾಥ್ ಮುಕ್ಕ, ಪ್ರಮೋದ್ ಶೆಟ್ಟಿ, ರಶೀದ್ ಮುಕ್ಕ ಉಪಸ್ಥಿತರಿದ್ದರು.







