ಬೈಕ್‌ಗೆ ಲಾರಿ ಢಿಕ್ಕಿ: ಮೂವರು ಮೃತ್ಯು

ಬೆಂಗಳೂರು, ಸೆ.21: ಬಟ್ಟೆ ವ್ಯಾಪಾರಿಯೊಬ್ಬರು ಬೈಕ್‌ನಲ್ಲಿ ಪತ್ನಿ, ಪುತ್ರನೊಂದಿಗೆ ಹೋಗುತ್ತಿದ್ದ ವೇಳೆ ಶರವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಶ್ರೀರಾಮಪುರದ ನಿವಾಸಿಗಳಾದ ಅಬ್ದುಲ್ ಕಲೀಲ್(34), ಅವರ ಪತ್ನಿ ಸುಲ್ತಾನಾ(28), ಪುತ್ರ ಅಬ್ದುಲ್ ಶಾಹಿದ್(7) ಮೃತಪಟ್ಟವರು ಎಂದು ಪೊಲೀಸರು ಗುರುತಿಸಿದ್ದಾರೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಅಬ್ದುಲ್ ಕಲೀಲ್ ಅವರು ಶ್ರೀರಾಮಪುರದಿಂದ ಪತ್ನಿ, ಮಗುವನ್ನು ಕರೆದುಕೊಂಡು ಹಳೆ ಮಡಿವಾಳದಲ್ಲಿರುವ ಸಂಬಂಧಿಕರ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಸರ್ಜಾಪುರ ರಸ್ತೆಯ ಜಂಕ್ಷನ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಅತಿ ವೇಗವಾಗಿ ಮುನ್ನುಗ್ಗಿದ ಲಾರಿ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿವಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





