ಬಂಟ್ವಾಳ : ಬಿಜೆಪಿ ಸದಸ್ಯರಿಂದ ಧರಣಿ
ತಹಶೀಲ್ದಾರರ ಸೂಚನೆಗೆ ಸ್ಪಂದಿಸದ ಪುರಸಭಾಡಳಿತ
ಬಂಟ್ವಾಳ, ಸೆ. 21:ಕಸ್ಬಾ ಗ್ರಾಮದ ರಥಬೀದಿಯಲ್ಲಿರುವ ಕದ ನಂಬರ್ 8-240 ಕಟ್ಟಡದ ವಿರುದ್ಧ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳವ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸುವ ಕುರಿತಾಗಿ ಬುಧವಾರ ತಹಶೀಲ್ದಾರರು ನೀಡಿದ ಸೂಚನೆಗೂ ಪುರಸಭಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಗುರುವಾರ ಸಂಜೆಯ ಬಳಿಕ ಅಹೋರಾತ್ರಿ ಧರಣಿ ಕುಳಿತರು.
ಮಧ್ಯಾಹ್ನದ ವೇಳೆ ಸದಸ್ಯ ದೇವದಾಸ್ ಶೆಟ್ಟಿ ಅವರು ಸೆ. 4ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ಪ್ರತಿ ಕೇಳಲು ಬಂದಾಗ ವಿವಾದಿತ ಕಟ್ಟಡಕ್ಕೆ ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕುರಿತ ನಿರ್ಣಯವನ್ನು ದಾಖಲಿಸಿರಲಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಅಸ್ಪಷ್ಟ ಉತ್ತರ ನೀಡಿ,ಅಧ್ಯಕ್ಷರಲ್ಲಿಯೇ ಮಾತುಕತೆ ನಡೆಸುವಂತೆ ತಿಳಿಸಿದ್ದರು ಎಂದು ಸದಸ್ಯ ದೇವದಾಸ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತರ ಸದಸ್ಯರಾದ ಗೋವಿಂದ ಪ್ರಭು, ಸುಗುಣ ಕಿಣಿ, ಭಾಸ್ಕರ್ ಟೈಲರ್‍ರವರು ಧರಣಿಯಲ್ಲಿ ಸೇರಿಕೊಂಡರು.
ಇದಕ್ಕೂ ಮೊದಲು ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ವಾಸು ಪೂಜಾರಿ ಸೇರಿದಂತೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಧರಣಿನಿರತ ಸದಸ್ಯರು ಪಟ್ಟುಸಡಿಲಿಸಲಿಲ್ಲ. ಸುದ್ದಿ ತಿಳಿದ ನಗರ ಠಾಣೆಯ ಎಸ್ಸೈ ರಕ್ಷಿತ್ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮಾಹಿತಿ ಪಡೆದುಕೊಂಡು ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.
ಜಿಲ್ಲಾಧಿಕಾರಿಯವರೇ ಇಲ್ಲಿಗೆ ಆಗಮಿಸಿ ತಮ್ಮ ಅಹವಾಲು ಕೇಳಬೇಕು ಇಲ್ಲವೇ ಮುಂದಿನ ಸಭೆಯಲ್ಲಿ ಈ ನಿರ್ಣಯವನ್ನು ದಾಖಲಿಸುವ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದಲ್ಲಿ ಅನಿರ್ಧಿಷ್ಟಾವಧಿವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಧರಣಿನಿರತ ಸದಸ್ಯರು ತಿಳಿಸಿದ್ದಾರೆ.







