ಗೌರಿ ಲಂಕೇಶ್ ಹತ್ಯೆ ಪ್ರಕರಣ: ದುಷ್ಕರ್ಮಿಯ ರೇಖಾಚಿತ್ರ ತಯಾರಿ

ಬೆಂಗಳೂರು, ಸೆ. 21: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ತನಿಖಾಧಿಕಾರಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನುರಿತ ರೇಖಾಚಿತ್ರ ರಚನಾಕಾರರಿಂದ ದುಷ್ಕರ್ಮಿಯ ರೇಖಾಚಿತ್ರ ತಯಾರಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸೆ.5ರ ಮಂಗಳವಾರ ರಾತ್ರಿ 7:55 ಸುಮಾರಿಗೆ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ಸ್ವಗೃಹ ಆವರಣದಲ್ಲಿ ದುಷ್ಕರ್ಮಿ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದ. ಹಂತಕನ ಚಹರೆಯನ್ನು ಪ್ರತ್ಯಕ್ಷ ದರ್ಶಿಗಳು ನೀಡಿರುವ ಮಾಹಿತಿ ಮತ್ತು ಸಿಸಿಟಿವಿ ದೃಶ್ಯ ಆಧರಿಸಿ ಈ ರೇಖಾಚಿತ್ರ ರಚನೆ ಮಾಡುವವರ ಸಹಾಯದಿಂದ ಹಂತಕನ ರೇಖಾಚಿತ್ರ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.
ರೇಖಾಚಿತ್ರವನ್ನು ಸಿಟ್ ತನಿಖಾಧಿಕಾರಿಗಳು ವಿಚಾರವಾದಿ ಪನ್ಸಾರೆ, ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಕಳುಹಿಸಿದ್ದಾರೆ. ಈ ರೇಖಾಚಿತ್ರವನ್ನು ಆಧರಿಸಿ ಸಿಟ್ ಅಧಿಕಾರಿಗಳು ಹಂತಕನ ಜಾಡು ಪತ್ತೆ ಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದ ವಿವರ: ಸಿಟ್ ತನಿಖಾಧಿಕಾರಿಗಳು ಸಿದ್ಧಪಡಿಸಿರುವ ರೇಖಾಚಿತ್ರದಲ್ಲಿ ಹಂತಕ ಫಾರ್ಮಲ್ ಅಂಗಿ ಧರಿಸಿದ್ದಾನೆ. ಬಿಳಿ ಬಣ್ಣದ ಹೆಲ್ಮೆಟ್ ಹಾಕಿರುವ ಆತ ಕೈಗೆ ವಾಚ್ ಕಟ್ಟಿಕೊಂಡಿದ್ದಾನೆ ಎಂದು ಸಿಟ್ ಮೂಲಗಳು ತಿಳಿಸಿವೆ. ಅಲ್ಲದೆ, ಹೆಲ್ಮೆಟ್ ಹಾಕಿರುವ ಕಾರಣ ಹಂತಕನ ಮುಖ ಕೂಡ ಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಎನ್ನಲಾಗಿದೆ.







