ಮಡಿಕೇರಿ ದಸರಾ ಕರಗೋತ್ಸವಕ್ಕೆ ಚಾಲನೆ

ಮಡಿಕೇರಿ, ಸೆ.21: ವಿವಿಧ ಪೂಜಾ ವಿಧಿ, ವಿಧಾನಗಳೊಂದಿಗೆ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ಕರಗೋತ್ಸವದ ಮೂಲಕ ನಗರದ ಪಂಪಿನ ಕೆರೆಯ ಬಳಿ ಚಾಲನೆ ನೀಡಲಾಯಿತು.
ಕಳೆದ ಹಲವಾರು ವರ್ಷಗಳ ಸಂಪ್ರದಾಯದಂತೆ ಈ ಬಾರಿ ಕೂಡ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗಗಳ ನಗರ ಸಂಚಾರ ಆರಂಭಗೊಂಡಿತು.
ಇಂದು ಮಧ್ಯಾಹ್ನ ನಾಲ್ಕೂ ದೇವಾಲಯಗಳಲ್ಲಿ ಶಕ್ತಿ ದೇವತೆಗಳ ವಿಶೇಷ ಆರಾಧನೆ ನಡೆಯಿತು. ನಂತರ ವಾದ್ಯಗೋಷ್ಠಿಗಳೊಂದಿಗೆ ಪಂಪಿನ ಕೆರೆಗೆ ತೆರಳಿ ಕರಗ ಕಟ್ಟಲಾಯಿತು. ಸಂಜೆ 6 ಗಂಟೆಯ ನಂತರ ವಿಶೇಷ ಪೂಜೆ, ವಿಧಿ ವಿಧಾನಗಳೊಂದಿಗೆ ಕರಗಗಳು ನಗರ ಸಂಚಾರವನ್ನು ಆರಂಭಿಸಿದವು.
ಕರಗಗಳು ತೆರಳುವ ಹಾದಿಯಲ್ಲಿ ತಳಿರು ತೋರಣ, ಹೂವು, ರಂಗೋಲಿಯ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಾಲಂಕೃತ ಮಾರ್ಗಗಳು ಕರಗೋತ್ಸವಕ್ಕೆ ಮೆರಗು ನೀಡಿದವು.
ಈ ಬಾರಿ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ.ಚಾಮಿ, ಶ್ರೀಕಂಚಿಕಾಮಾಕ್ಷಿಯಮ್ಮ ದೇವಾಲಯದ ಕರಗವನ್ನು ನವೀನ್ ಕುಮಾರ್, ಶ್ರೀದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಶ್ರೀಪಿ.ಎ.ಉಮೇಶ್ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಅನಿಶ್ ಕುಮಾರ್ ಹೊತ್ತು ನಗರ ಸಂಚಾರ ಆರಂಭಿಸಿದರು.
ಈ ಸಂದರ್ಭದಲ್ಲಿ ಶಾಸಕದ್ವಯರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಎಸ್ಪಿ ರಾಜೇಂದ್ರ ಪ್ರಸಾದ್, ಟಿ.ಪಿ.ರಮೇಶ್, ನಗರ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ, ನಗರಸಭಾ ಆಯುಕ್ತರಾದ ಶುಭಾ, ನಗರಸಭಾ ಸದಸ್ಯರಾದ ಟಿ.ಹೆಚ್.ಉದಯ ಕುಮಾರ್, ನಗರ ಠಾಣಾಧಿಕಾರಿ ವೆಂಕಟರಮಣ, ದಸರಾ ಸಮಿತಿಯ ಪ್ರಮುಖರಾದ ಪಿ.ಜಿ. ಸುಕುಮಾರ್, ಮನು ಮಂಜುನಾಥ್, ಟಿ.ಪಿ.ರಾಜೇಂದ್ರ, ಮಧುರಯ್ಯ, ನಗರಸಭಾ ಸದಸ್ಯರುಗಳು ಮೊದಲಾದವರು ಹಾಜರಿದ್ದು ಕರಗಗಳಿಗೆ ಪೂಜೆ ಸಲ್ಲಿಸಿದರು.
ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಎ.ವಿ.ಶಾಲೆ ಬಳಿಯ ಬನ್ನಿಮಂಟಪಕ್ಕೆ ತೆರಳಿ, ಅಲ್ಲಿಂದ ಮಹದೇವಪೇಟೆಯ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀರಾಮಮಂದಿರ ತಲುಪಿ, ಅಲ್ಲಿಯೂ ಕರಗಗಳಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ದಾರಿಯುದ್ದಕ್ಕೂ ಸಾರ್ವಜನಿಕರು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿತು.







