ಬಿಜೆಪಿ ಬಹಿರಂಗ ಚರ್ಚೆಗೆ ಬರುತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಸೆ.22: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದರೆ ಅವರು ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಪ್ಪಳದಲ್ಲಿ ನಡೆಯುತ್ತಿರುವ ಸವಲತ್ತುಗಳ ವಿತರಣಾ ಸಮಾವೇಶಕ್ಕೆ ಜನರನ್ನು ಬೆದರಿಸಿ ಕರೆತರಲಾಗಿದೆ ಎಂಬುದು ಆಧಾರ ರಹಿತ ಆರೋಪ. ನೂರಕ್ಕೆ ನೂರರಷ್ಟು ಸುಳ್ಳು ಎಂದು ಹೇಳಿದರು.
ಸಮಾವೇಶಕ್ಕೆ ಬಾರದವರಿಗೆ ಅನ್ನಭಾಗ್ಯ ಯೋಜನೆ ಅಕ್ಕಿ ನಿಲ್ಲಿಸಲಾಗುವುದೇ? ಆ ರೀತಿ ಮಾಡಲು ಸಾಧ್ಯವೇ ಇಲ್ಲ. ಸಮಾವೇಶಕ್ಕೆ ಹರಿದು ಬರುತ್ತಿರುವ ಜನಸಾಗರ ನೋಡಿ ಬಿಜೆಪಿಯವರು ಈ ರೀತಿ ಆಪಾದನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳಿಗೆ ರಾಜ್ಯ ಸರಕಾರ ಪ್ರತಿವರ್ಷ 10 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದ್ದೇವೆ. 60 ಸಾವಿರ ಕೋಟಿ ರೂ.ಯನ್ನು ಈ ಐದು ವರ್ಷದಲ್ಲಿ ಖರ್ಚು ಮಾಡುತ್ತಿದ್ದೇವೆ. ಆದರೆ, ಬಿಜೆಪಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಖರ್ಚು ಮಾಡಿದ್ದು, ಕೇವಲ 18 ಸಾವಿರ ಕೋಟಿ ರೂ.ಎಂದರು.
ಕೃಷ್ಣಾ ಬಿ-ಸ್ಕೀಮ್ ಯೋಜನೆಗೆ ಈಗ ಟೆಂಡರ್ ಕರೆಯಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಮೂರನೆ ಹಂತದ ಯೋಜನೆಗೆ 17,500 ಕೋಟಿ ರೂ.ವೆಚ್ಚ ಮಾಡುವುದು ಎಂದು ಹೇಳಿದ್ದ ಬಿಜೆಪಿ, ನಯಾಪೈಸೆ ಹಣವನ್ನು ಕೊಡಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.







