"ಸಚಿವ ರೈ ಪುರಸಭೆಯ ಅನುಮತಿ ಪಡೆದು ಕಟ್ಟಡ ನಿರ್ಮಿಸಿದ್ದಾರೆ"
ಬಂಟ್ವಾಳ, ಸೆ. 22: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬುಡಾ ಹಾಗೂ ಬಂಟ್ವಾಳ ಪುರಸಭೆಯ ಅನುಮತಿ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಅಲ್ಲದೆ ಇದಕ್ಕೆ ಡೋರ್ ನಂಬರ್ ಕೂಡಾ ನೀಡಲಾಗಿದೆ ಎಂದು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ಪೇಟೆಯಲ್ಲಿ ಸಚಿವರ ಹೆಸರಿನಲ್ಲಿ ಇರುವ ಅಕ್ರಮ ಕಟ್ಟಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಪುರಸಭೆ ಕಚೇರಿ ಎದುರು ವಿಪಕ್ಷ ಬಿಜೆಪಿ ಸದಸ್ಯರು ಸೆ. 20ರಿಂದ ಪ್ರತಿಭಟನೆ ನಡೆಸಿದ್ದರು. ಆದರೆ ಈ ಕಟ್ಟಡ ವಾಣಿಜ್ಯ ಕಟ್ಟಡವಾಗಿದ್ದು, ವಿನ್ಯಾಸ ನಡಾವಳಿಯಲ್ಲಿ ಅನುಮೋದನೆ ದೊರಕಿದೆ. ಯೋಜನಾ ಪ್ರಾಧಿಕಾರದಿಂದಲೂ ಅನುಮೋದನೆ ದೊರಕಿದೆ ಎಂದ ಅವರು, ನಗರ ಪ್ರಾಧಿಕಾರ ಅನುಮತಿ ಸಂಖ್ಯೆ, ಪುರಸಭೆ ಪರವಾನಿಗೆ ಸಂಖ್ಯೆ ಹಾಗೂ ಕಟ್ಟಡ ನಂಬ್ರದ ದಾಖಲೆಗಳನ್ನು ಒದಗಿಸಿದರು.
ಸಚಿವ ಬಿ.ರಮಾನಾಥ ರೈ ಅವರು ಸ್ವಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿಪಕ್ಷ ಬಿಜೆಪಿ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣದ ಬಗ್ಗೆ ನಮ್ಮಲ್ಲಿ ಸಾಕಷ್ಟು ದಾಖಲೆಗಳು ಇವೆ. ಸುಳ್ಳು ಆರೋಪ ಮಾಡುವ ಮೂಲಕ ಸಚಿವರ ಮಾನಹಾನಿಗೆ ಯತ್ನಿಸಿದರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಮಕೃಷ್ಣ ಆಳ್ವ ಹೇಳಿದರು.
ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ಚಲಿಸುವ ಗಾಡಿಗೆ ಅನುಮತಿ ಪಡೆದು ರಾಷ್ಟ್ರೀಯ ಹೆದ್ದಾರಿ ಸಮೀಪ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಮಾಜಿ ಪುರಸಭಾ ಸದಸ್ಯ ದಿನೇಶ್ ಭಂಡಾರಿ ಪ್ರಾಧಿಕಾರದ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಬಿಜೆಪಿ ಮುಖಂಡ ಉದಯ ಕುಮಾರ್ 800 ಚದರ ಅಡಿ ಕಟ್ಟಡಕ್ಕೆ ತೆರಗೆ ಪಾವತಿಸುತ್ತಿದ್ದು, 2 ಸಾವಿರ ಚದರ ಅಡಿ ಅಕ್ರಮ ಕಟ್ಟಡ ನಿರ್ಮಾಣ, ಅದೇ ರೀತಿ ಬುಡಾ ಮಾಜಿ ಅಧ್ಯಕ್ಷ ಗೋವಿಂದ ಪ್ರಭು ಬಾರ್/ರೆಸ್ಟೋರೆಂಟ್ ಕಟ್ಟಡವನ್ನು ಅಕ್ರಮವಾಗಿ ವಿಸ್ತರಿಸಿ ಕಟ್ಟಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಮಹಮ್ಮದ್ ಶರೀಫ್, ಜಗದೀಶ ಕುಂದರ್, ಚಂಚಲಾಕ್ಷಿ, ವೆಂಕಪ್ಪ ಪೂಜಾರಿ ಇದ್ದರು.







