ಸಿದ್ದಾರ್ಥ ಅವರ ಮನೆ, ಕಚೇರಿ ಮೇಲಿನ ಐಟಿ ದಾಳಿಯ ಬಗ್ಗೆ ನನಗೆ ಮಾಹಿತಿ ಇಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು, ಸೆ.22: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರ ಮನೆ ಮತ್ತು ಕಂಪೆನಿಗಳ ಮೇಲಿನ ಐಟಿ ದಾಳಿಯ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಳೆದ ಎರಡು ದಿನಗಳ ಹಿಂದೆಯೇ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ನಿನ್ನೆ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗೆ ತೆರಳುಳ ಮುನ್ನ ಮಾಧ್ಯಮದವರೊಂದಿಗೆ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ ಅವರ ಮನೆ ಮೇಲೆ ನಡೆದಿರುವ ಐಟಿ ದಾಳಿ ಬಗ್ಗೆ ನನಗೆ ಗೊತ್ತಿಲ್ಲ. ನಾನೂ ಮಾಧ್ಯಮದಲ್ಲಿ ನೋಡಿ ತಿಳಿದು ಕೊಂಡೆ ಎಂದರು.
ಈ ಹಿಂದೆಯೂ ರಾಜ್ಯದಲ್ಲಿ ವಿರೋಧ ಪಕ್ಷದವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಇದಕ್ಕೆ ಸಿದ್ದಾರ್ಥ ಹೊರತಾಗಿಲ್ಲ, ಅವರ ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿಯಲ್ಲಿದ್ದರೂ ಐಟಿ ದಾಳಿ ನಡೆದಿರುವುದು ಆಶ್ಚರ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮನೆಯ ಮುಂದೆ ಜಮಾಯಿಸಿದ್ದ ಕ್ಷೇತ್ರದ ಜನರೊಂದಿಗೆ ಜನತಾ ದರ್ಶನ ಮಾಡಿದ ಸಿಎಂ, ಎಲ್ಲರಿಂದಲೂ ಅರ್ಜಿ ಪಡೆದರು.
ಈ ಸಂದರ್ಭದಲ್ಲಿ ಕ್ಷೇತ್ರದ ವ್ಯಕ್ತಿಯೋರ್ವ 'ನಿಮ್ಮನ್ನ ನೋಡಲು ಪೊಲೀಸರು ಬಿಡುತ್ತಿಲ್ಲ' ಎಂದು ಏರುಧ್ವನಿಯಲ್ಲೇ ಹೇಳಿದ. ಇದಕ್ಕೆ ಸಿಎಂ ಏರುಧ್ವನಿಯಲ್ಲೇ, ಹೇ ಏನ್ ನಿನ್ನನ್ನ ಕೋಣೆಯೊಳಗೆ ಬಿಡಲು ಸಾಧ್ಯವೇ ಎಂದು ಹಳ್ಳಿ ಭಾಷೆಯಲ್ಲಿ ಪ್ರಶ್ನಿಸಿದರು.







