ಪೊಲೀಸರಿಂದ ತಪ್ಪಿಸಿಕೊಂಡ ಕಳವು ಆರೋಪಿ
ಶಂಕರನಾರಾಯಣ, ಸೆ.22: ಕಳ್ಳತನ ಪ್ರಕರಣ ಆರೋಪಿಯೊಬ್ಬ ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಪರಾರಿಯಾದ ಘಟನೆ ಇಂದು ಸಿದ್ಧಾಪುರದ ಆಜ್ರಿ ಎಂಬಲ್ಲಿ ನಡೆದಿದೆ.
ಪರಾರಿಯಾದ ಆರೋಪಿಯನ್ನು ಆಜ್ರಿಯ ಪ್ರದೀಪ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಆತ ಎರಡು ದಿನಗಳ ಹಿಂದೆ ಗ್ರಾಪಂ ಮಾಜಿ ಅಧ್ಯಕ್ಷೆ ಮಾಲತಿ ಕುಲಾಲ್ ಎಂಬವರ ಮನೆಗೆ ನುಗ್ಗಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮಾಲತಿ ಕುಲಾಲ್ ಅವರ ನೆರೆಮನೆ ನಿವಾಸಿ ಎಂದು ಗುರುತಿಸಲಾಗಿದೆ.
ಪೊಲೀಸರಿಂದ ತಲೆಮರೆಸಿಕೊಂಡಿದ್ದ ಪ್ರದೀಪ್ ಶೆಟ್ಟಿ, ಆಜ್ರಿಯಲ್ಲಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಶಂಕರನಾರಾಯಣ ಪೊಲೀಸರು ಆ ಸ್ಥಳಕ್ಕೆ ದಾಳಿ ನಡೆಸಿದರು. ಅದನ್ನು ಅರಿತ ಆತ ಅಲ್ಲಿಂದ ಪರಾರಿಯಾದನು. ಕೂಡಲೇ ಪೊಲೀಸರು ಆತ ಬೆನ್ನಟ್ಟಿದರು. ಆದರೆ ಆತ ಪೊಲೀಸರ ಕೈಯಿಂದ ತಪ್ಪಿಸಿ ಕೊಂಡ ಅರಣ್ಯದೊಳಗೆ ಕಣ್ಮರೆಯಾದನು ಎಂದು ತಿಳಿದುಬಂದಿದೆ. ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







