ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ದಸಂಸ ಧರಣಿ

ಶಿವಮೊಗ್ಗ, ಸೆ. 22: ಮಹಾನಗರ ಪಾಲಿಕೆ ವ್ಯಾಪ್ತಿಯ 5ನೆ ವಾರ್ಡ್‍ನ ತುಂಗಾ ಮೇಲ್ದಂಡೆ ಕಾಲುವೆ ಸಮೀಪ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಹಕ್ಕಿಪಿಕ್ಕಿ ಜನಾಂಗದವರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು ಶುಕ್ರವಾರ ನಗರದ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು.
ಈ ವೇಳೆ ಧರಣಿ ನಿರತರರು ಮಾತನಾಡಿ, ಹಕ್ಕಿಪಿಕ್ಕಿ ಜನಾಂಗದ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳು ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಪಕ್ಕದಲ್ಲಿರುವ ಮಲ್ಲಿಗೇನಹಳ್ಳಿಯ ಅಂಬೇಡ್ಕರ್ ನಗರದ ಸರ್ವೇ ನಂಬರ್ 18 ರಲ್ಲಿನ 3 ಎಕರೆ 20 ಗುಂಟೆ ಸರ್ಕಾರಿ ಜಮೀನಿನಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಸ್ಥಳದಲ್ಲಿ ಕನಿಷ್ಠ ಮೂಲ ಸೌಕರ್ಯ ವ್ಯವಸ್ಥೆಯೂ ಇಲ್ಲವಾಗಿದೆ. ನೀರು, ವಿದ್ಯುತ್ ಸಂಪರ್ಕ, ಪಡಿತರ ಚೀಟಿ, ರಸ್ತೆ, ಚರಂಡಿ, ಶೌಚಾಲಯವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರೂ ಕೂಡ ಇಲ್ಲವಾಗಿದೆ ಎಂದು ದೂರಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದವರು ವಾಸಿಸುತ್ತಿರುವ ಪಕ್ಕದಲ್ಲಿ ಸ್ಟಾರ್ ಹೋಟೆಲ್ ನಿರ್ಮಾಣವಾಗುತ್ತಿದ್ದು, ಈ ಕಾರಣಕ್ಕೆ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಕ್ಕಿಪಿಕ್ಕಿ ಜನಾಂಗದವರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದ ಕುಟುಂಬಗಳು ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಅಧಿಕಾರಿಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ನಿವಾಸಿಗಳಿಗೆ ಮೂಲಸೌಕರ್ಯ, ಪಡಿತರ ಚೀಟಿ ಕೊಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಡಿಎಸ್ ಎಸ್ ಸಂಘಟನೆಯ ಮುಖಂಡರಾದ ಎಂ.ಗುರುಮೂರ್ತಿ, ಹಾಲೇಶಪ್ಪ, ರವಿ ಹರಿಗೆ, ರಮೇಶ್, ಶಂಕರ್, ಚಂದ್ರು, ಗೊವಿಂದ, ವೆಂಕಟೇಶ್, ರತನ್ ಜ್ಯೋತಿ ಸೇರಿದಂತೆ ಮೊದಲಾದವರಿದ್ದರು.







