ರೊಹಿಂಗ್ಯಾ ಮುಸ್ಲಿಮರ ಮೇಲಿನ ಹಲ್ಲೆಗೆ ಖಂಡನೆ
ಶಿವಮೊಗ್ಗ, ಸೆ. 22: ಬರ್ಮಾ ದೇಶದಲ್ಲಿ ರೊಹಿಂಗ್ಯ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಜಮಿಯತ್ ಉಲ್ಮಾ-ಎ-ಹಿಂದ್ ಶಿವಮೊಗ್ಗ ಜಿಲ್ಲಾ ಘಟಕ ಖಂಡಿಸಿದೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಜಮಿಯತ್ ಉಲ್ಮಾ-ಎ-ಹಿಂದ್ ಜಿಲ್ಲಾಧ್ಯಕ್ಷ ಮುಝಕ್ಕಿರ್ ಖಾಸ್ಮಿ ಮಾತನಾಡಿ, ರೋಹಿಂಗ್ಯಾ ಮುಸ್ಲಿಮರ ಮೇಲೆ ಬರ್ಮಾ ದೇಶದ ಸೈನಿಕರು ದೌರ್ಜನ್ಯ ನಡೆಸುತ್ತಿದ್ದಾರೆ. ಮಹಿಳೆಯರು ಮಕ್ಕಳು ಹಾಗೂ ಯುವಕರ ಹತ್ಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬರ್ಮಾ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಮ್ ಸಮುದಾಯಕ್ಕೆ ಇಲ್ಲಿಯವರೆಗೂ ಶಾಶ್ವತ ನಾಗರಿಕತೆ ನೀಡಿಲ್ಲ. ಇದು ಆ ದೇಶದ ಜನವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ದೌರ್ಜನ್ಯದಿಂದ ಲಕ್ಷಾಂತರ ರೋಹಿಂಗ್ಯ ಮುಸ್ಲಿಮರು ಬರ್ಮಾ ದೇಶ ತೊರೆಯುತ್ತಿದ್ದಾರೆ. ವಸತಿಗಾಗಿ ಪರದಾಡುವಂತಾಗಿದೆ ಎಂದರು.
ಭಾರತ ಸರ್ಕಾರವು ಮಧ್ಯ ಪ್ರವೇಶಿಸಿ ಬರ್ಮಾ ದೇಶಕ್ಕೆ ಸೂಕ್ತ ಎಚ್ಚರಿಕೆ ನೀಡಬೇಕು. ದೌರ್ಜನ್ಯ ನಿಲ್ಲಿಸುವಂತೆ ತಾಕೀತು ಮಾಡಬೇಕು.ಅಲ್ಲದೆ, ನಿರಾಶ್ರಿತರಿಗೆ ಮತ್ತು ನೊಂದ ಸಮುದಾಯಕ್ಕೆ ಸಹಾಯ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹೇಡಿಗಳು ಬರ್ಬರವಾಗಿ ಗುಂಡಿಕ್ಕಿ ಕೊಂದಿರುವುದು ಖಂಡನೀಯ. ತನಿಖೆ ನಡೆಸುತ್ತಿರುವ ಎಸ್‍ಐಟಿ ತಂಡ ತನಿಖೆಯನ್ನು ತೀವ್ರಗೊಳಿಸಿ ಕೊಲೆಗಾರರನ್ನು ಬಂಧಿಸಬೇಕು. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಇರ್ಫಾನ್, ಮೊಹಮ್ಮದ್ ಅಸ್ಲಾಂ, ಅಫೀಝ್ ಉಮರ್, ಮೊಹಮ್ಮದ್ ಖಲೀಂವುಲ್ಲಾ ಮೊದಲಾದವರಿದ್ದರು.







