ಅಕ್ರ-ಸಕ್ರಮ: ಡಿಸೆಂಬರ್ ನೊಳಗೆ ವಿಲೇವಾರಿ ಮಾಡಲು ಸಚಿವ ಕಾಗೋಡು ತಿಮ್ಮಪ್ಪ ಸೂಚನೆ
ಶಿವಮೊಗ್ಗ, ಸೆ.22: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ಹಕ್ಕು ಪತ್ರಕ್ಕಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಡಿಸೆಂಬರ್ ಒಳಗಾಗಿ ಕಡ್ಡಾಯವಾಗಿ ವಿಲೇವಾರಿ ಮಾಡಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ 94ಸಿ, 94ಸಿಸಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ 20075 ಅರ್ಜಿಗಳನ್ನು 94ಸಿಸಿಯಡಿಯಲ್ಲಿ ನಗರಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿರುವವರು ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದಾರೆ. ಇದರ ಪೈಕಿ 10950ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 8523ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.
ಸೊಪ್ಪಿನಬೆಟ್ಟ, ಅರಣ್ಯ, ಖಾನು ಜಮೀನಿನಲ್ಲಿ 1463ಅರ್ಜಿಗಳು, ಗೋಮಾಳ ಜಮೀನಿನಲ್ಲಿ 2384ಅರ್ಜಿಗಳು ಹಾಗೂ 5278 ಇತರ ಅರ್ಜಿಗಳು ಬಾಕಿಯಿವೆ. ಈವರೆಗೆ 1596 ಹಕ್ಕುಪತ್ರ ನೀಡಲಾಗಿದ್ದು, 831ಹಕ್ಕುಪತ್ರಗಳನ್ನು ನೀಡಲು ಬಾಕಿ ಇವೆ. ಎಲ್ಲಾ ಅರ್ಜಿಗಳನ್ನು ಡಿಸೆಂಬರ್ ಒಳಗಾಗಿ ವಿಲೇವಾರಿ ಮಾಡಿ ಎಲ್ಲಾ ಅರ್ಹರಿಗೆ ಹಕ್ಕುಪತ್ರ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಗೋಮಾಳ ಜಮೀನಿನ ಕುರಿತಾದ ಅರ್ಜಿಗಳನ್ನು ವಿಲೇವಾರಿ ಮಾಡಲು ಯಾವುದೇ ಅಡ್ಡಿಯಿಲ್ಲ. ಈ ಕುರಿತು ಸರ್ಕಾರ ಈಗಾಗಲೇ ಸ್ಪಷ್ಟ ಆದೇಶ ಹೊರಡಿಸಿದ್ದು, ಈ ಕುರಿತು ಎಲ್ಲಾ ತಹಶೀಲ್ದಾರರು ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಈವರೆಗೆ 8604 ಹಕ್ಕುಪತ್ರಗಳನ್ನು ನೀಡಲಾಗಿದ್ದು, 5584ಹಕ್ಕುಪತ್ರಗಳು ನೀಡಲು ಬಾಕಿಯಿವೆ. ಕೆಲವು ತಾಲೂಕಿನಲ್ಲಿ ಮಾತ್ರ ಸರ್ವೆ ಇತ್ಯಾದಿ ಕಾರ್ಯ ಪರಿಣಾಮಕಾರಿಯಾಗಿ ನಡೆದಿದ್ದು, ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸಬೇಕು. ಬಾಕಿಯಿರುವ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಿಡಿಒ ಜಂಟಿ ಸಮೀಕ್ಷೆ ನಡೆಸಿ ತಕ್ಷಣ ವರದಿಯನ್ನು ಸಲ್ಲಿಸಬೇಕು ಎಂದರು.
ಹಲವು ಪ್ರಕರಣಗಳಲ್ಲಿ ಹಕ್ಕುಪತ್ರಗಳನ್ನು ನೀಡಿದ್ದರೂ, ಆರ್‍ಟಿಸಿಯಲ್ಲಿ ಇನ್ನೂ ನಮೂದಿಸದ ಕಾರಣ ತೊಂದರೆ ಉಂಟಾಗಿದೆ. ತಹಶೀಲ್ದಾರ್‍ಗಳು ಅಂತಹ ಪ್ರಕರಣಗಳಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಹೊಸನಗರ ತಾಲೂಕಿನಲ್ಲಿ ಕೆಪಿಸಿ ಜಮೀನಿನಲ್ಲಿ ಹಲವಾರು ಮಂದಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿ ಹಕ್ಕುಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಗೆ ನೀಡಲಾಗಿದ್ದ ಸುಮಾರು 2300ಎಕ್ರೆ ಜಮೀನನ್ನು ಮತ್ತೆ ಸರ್ಕಾರಕ್ಕೆ ಹಸ್ತಾಂತರಿಸಲು ಕೋರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಅರಣ್ಯ ಹಕ್ಕು ಕಾಯ್ದೆ: ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹರಿಗೆ ಜಮೀನು ಒದಗಿಸಲು ಎಲ್ಲಾ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಇದುವರೆಗೆ ಕಾಯ್ದೆಯಡಿ 85518 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 2506 ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇದರಲ್ಲಿ ಪರಿಶಿಷ್ಟ ವರ್ಗದ 1941, ಇತರೆ 440ಹಾಗೂ 125ಸಮುದಾಯ ಸಂಬಂಧಿಸಿದಂತೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಇನ್ನೂ 44570ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ಆದಷ್ಟು ಬೇಗನೇ ವಿಲೇವಾರಿ ಮಾಡಬೇಕು ಎಂದರು.
ಡೀಮ್ಡ್ ಫಾರೆಸ್ಟ್ ಕುರಿತು ಸಭೆ: ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಬಹುದಾದ ಅಥವಾ ಸೇರಿಸಬಹುದಾದ ಗ್ರಾಮಗಳ ಪಟ್ಟಿಯನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸುವ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ಜನಪತ್ರಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು. ಈಗಾಗಲೇ ಸಿದ್ಧಪಡಿಸಲಾಗಿರುವ ಪಟ್ಟಿಯನ್ನು ಆಯಾ ಭಾಗದ ಶಾಸಕರಿಗೆ ನೀಡಬೇಕು. ಯಾವುದೇ ವಿಳಂಬ ಮಾಡಬಾರದು. ಸಭೆಯ ಬಳಿಕ ಅಗತ್ಯವಿದ್ದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಬಹುದಾಗಿದೆ ಎಂದು ತಿಳಿಸಿರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಲೋಕೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







