‘‘ರೋಹಿಂಗ್ಯನ್ನರಲ್ಲಿರುವ ದುಷ್ಟರನ್ನು ಶಿಕ್ಷಿಸಿ, ಇತರರಿಗೆ ಆಶ್ರಯ ನೀಡಿ’’
ಸುಪ್ರೀಂ ಕೋರ್ಟಿಗೆ ರೋಹಿಂಗ್ಯನ್ನರಿಬ್ಬರ ಮನವಿ

ಹೊಸದಿಲ್ಲಿ, ಸೆ. 23: ಮಾಯನ್ಮಾರ್ ದೇಶದಲ್ಲಿನ ಹಿಂಸೆಗೆ ಬೆದರಿ ಅಲ್ಲಿಂದ ಪಲಾಯನಗೈದು ಭಾರತದಲ್ಲಿ ಆಶ್ರಯ ಅರಸಿರುವ ರೋಹಿಂಗ್ಯ ಮುಸ್ಲಿಮರಲ್ಲಿ ಉಗ್ರವಾದಿಗಳೂ ಇರುವ ಸಾಧ್ಯತೆಯಿರುವುದರಿಂದ ಅವರಿಂದ ದೇಶದ ಭದ್ರತೆಗೆ ಅಪಾಯವಿದೆಯೆಂಬ ಕೇಂದ್ರದ ವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಮುಂದೆ ಅಪೀಲು ಸಲ್ಲಿಸಿರುವ ಇಬ್ಬರು ಸದಸ್ಯರು, ಸರಕಾರವು ರೋಹಿಂಗ್ಯನ್ನರಲ್ಲಿರುವ ಕೆಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಆದರೆ ಮುಗ್ಧರನ್ನು ಗಡೀಪಾರು ಮಾಡಬಾರದೆಂದೂ ಮನವಿ ಮಾಡಿದ್ದಾರೆ.
ಕೇಂದ್ರ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ಅಫಿದಾವತ್ ಗೆ ಸ್ಪಂದಿಸಿ ವಕೀಲ ಪ್ರಶಾಂತ್ ಭೂಷಣ್ ಮುಖಾಂತರ ಮನವಿ ಸಲ್ಲಿಸಿರುವ ಇಬ್ಬರು ಅಪೀಲುದಾರರು ಭಾರತದಲ್ಲಿ ಕ್ರಮವಾಗಿ 2011 ಹಾಗೂ 2012ರಿಂದ ವಾಸಿಸುತ್ತಿದ್ದಾರೆ. ‘‘ಭಾರತದಲ್ಲಿರುವ ರೋಹಿಂಗ್ಯನ್ನರಲ್ಲಿ ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಇರುವ ಆರೋಪಗಳನ್ನು ಪರಿಶೀಲಿಸಬೇಕು. ಅಪೀಲುದಾರರ ವಿರುದ್ಧವೂ ಯಾವುದೇ ದೂರುಗಳಿಲ್ಲ. ದೇಶದ ಭದ್ರತೆಗೆ ಅಪಾಯವುಂಟು ಮಾಡುವಂತಹ ಅರೋಪದೊಂದಿಗೆ ಯಾವುದೇ ರೋಹಿಂಗ್ಯನ್ನರ ವಿರುದ್ಧ ಒಂದೇ ಒಂದು ಎಫ್‌ಐಆರ್ ದಾಖಲಾಗಿಲ್ಲ’’ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು.
‘‘ಒಂದು ವೇಳೆ ಯಾವುದೇ ರೋಹಿಂಗ್ಯನ್ನರು ದೇಶದ ಭದ್ರತೆಗೆ ಅಪಾಯವುಂಟು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆಂದು ಕಂಡು ಬಂದಲ್ಲಿ ಅವರ ವಿರುದ್ಧ ದೇಶದ ಕಾನೂನಿನಂತೆ ಕ್ರಮ ಕೈಗೊಂಡು ಅವರಿಗೆ ನಿರಾಶ್ರಿತರ ಸ್ಥಾನಮಾನವನ್ನೂ ನಿರಾಕರಿಸಬಹುದು,’’ ಎಂದು ಅಪೀಲುದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸುಮಾರು 40,000 ರೋಹಿಂಗ್ಯನ್ನರನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವ ಕೇಂದ್ರದ ನಿರ್ಧಾರವನ್ನು ವಿರೋಧಿಸುವುದಾಗಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳಿರುವುದನ್ನೂ ಅಪೀಲುದಾರರು ಉಲ್ಲೇಖಿಸಿದ್ದಾರೆ.
‘‘ಭಾರತದಲ್ಲಿ ಎಲ್ಲಿಯೂ ವಾಸಿಸಲು ಹಾಗೂ ತಿರುಗಾಡಲು ರೋಹಿಂಗ್ಯನ್ನರೇನೂ ಅನುಮತಿ ಕೇಳುತ್ತಿಲ್ಲ, ಬದಲಾಗಿ ಭಾರತದ ಸಂವಿಧಾನದ 21ನೇ ವಿಧಿಯನ್ವಯ ಎಲ್ಲರಿಗೂ ಖಾತರಿಪಡಿಸಲಾದ ಬದುಕುವ ಹಕ್ಕನ್ನು ಕೇಳುತ್ತಿದ್ದಾರೆ,’’ ಎಂದೂ ಅವರು ತಿಳಿಸಿದ್ದಾರೆ.







