ಆಳ್ವಾಸ್ ಉದ್ಯಮಾಡಳಿತ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಡಾ.ಜಿ.ವಿ. ಜೋಶಿ ನೇಮಕ

ಮೂಡುಬಿದಿರೆ, ಸೆ. 23: ಆರ್ಥಿಕ ತಜ್ಞ, ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ನಿಕಟಪೂರ್ವ ಸದಸ್ಯ ಡಾ. ಜಿ.ವಿ.ಜೋಶಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಬೋಧನೆ ಮತ್ತು ಸಂಶೋಧನಾ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆಂದು ವಿಭಾಗದ ಡೀನ್ ಪ್ರೊ. ಪಿ ರಾಮಕೃಷ್ಣ ಚಡಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿ.ವಿ.ಯಲ್ಲಿ ಜೋಶಿ 26 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಅವರ ಸಂಯೋಜಕತ್ವದಲ್ಲಿ ಮಂಗಳೂರು ವಿ.ವಿ.ಯ ಕಾರ್ಪೊರೇಶನ್ ಬ್ಯಾಂಕ್ ನ ಅಧ್ಯಯನ ಪೀಠ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿತ್ತು. ಪೀಠ ಪ್ರಕಟಿಸಿದ ಐದು ಪುಸ್ತಕಗಳು ಬ್ಯಾಂಕಿಂಗ್ ತಜ್ಞರ ಮತ್ತು ಅರ್ಥಶಾಸ್ತ್ರಜ್ಞರ ಪ್ರಶಂಸೆ ಗಳಿಸಿವೆ.
ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಡಾ. ಜೋಶಿ ಸೇವೆ ಸಲ್ಲಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಕುರಿತು ವಿಶೇಷ ಸಂಶೋಧನೆ ಮಾಡಿರುವ ಜೋಶಿ ಉಗಾಂಡಾದ ಪ್ರಸಿದ್ಧ ಮೆಕೆರೆರೆ ವಿವಿಯ ಬಿ-ಸ್ಕೂಲಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಮೂರು ವರ್ಷ ಕೆಲಸ ನಿರ್ವಹಿಸಿದ್ದರು.





