ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿಗೆ ಮೇಯರ್ ಸ್ಥಾನ ನೀಡಲು ಆಗ್ರಹ
ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
ಬೆಂಗಳೂರು, ಸೆ. 23: ಬಿಬಿಎಂಪಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಯ ಮೀಸಲಾತಿ ವಾರ್ಡ್‌ನಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಮೇಯರ್ ಹುದ್ದೆಗೆ ಅರ್ಹರೆಂದು ಪರಿಗಣಿಸಬೇಕು ಎಂದು ದಲಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಎನ್.ರಾಮಕೃಷ್ಣ, ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗಾಗಿ ಸೆ.28 ರಂದು ಚುನಾವಣೆ ನಡೆಯಲಿದೆ. ಈ ಬಾರಿ ಮೇಯರ್ ಸ್ಥಾನವನ್ನು ಪರಿಶಿಷ್ಟ ಅಭ್ಯರ್ಥಿಗೆ ಮೀಸಲಿಟ್ಟಿದ್ದಾರೆ. ಆದರೆ, ಮೀಸಲು ಕ್ಷೇತ್ರದಿಂದ ಹೊರತುಪಡಿಸಿ, ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದವರಿಗೆ ಈ ಹುದ್ದೆ ನೀಡಲು ಮುಂದಾಗಿರುವುದು ಸರಿಯಲ್ಲ. ಆದುದರಿಂದ ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾದವರಿಗೆ ಮಾತ್ರ ಈ ಹುದ್ದೆ ನೀಡಬೇಕು ಎಂದು ವಿಚಾರಣೆಗಾಗಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದರು.
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಆದರೆ, ಕಾಂಗ್ರೆಸ್‌ನ ಪ್ರಭಾವಿ ಹಾಗೂ ಸಾಮಾನ್ಯ ಕ್ಷೇತ್ರ(ದೇವರಜೀವನಹಳ್ಳಿ)ದಿಂದ ವಿಜೇತರಾಗಿರುವ ಸಂಪತ್ ರಾಜ್ ಹಾಗೂ ಸುಭಾಷ್ ನಗರ ವಾರ್ಡ್‌ನಿಂದ ಆಯ್ಕೆಯಾದ ಗೋವಿಂದರಾಜ್ ರನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಚುನಾವಣೆ ನಿಯಮದ ಅನ್ವಯ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಿಟ್ಟ ಮೇಲೆ ಮೀಸಲು ಕ್ಷೇತ್ರದಿಂದ ಆಯ್ಕೆಯಾದವರಿಗೆ ಮಾತ್ರ ಮೇಯರ್ ಸ್ಥಾನ ನೀಡಬೇಕು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದ ಎಸ್ಸಿಗೆ ಸೇರಿದ ಸಂಪತ್‌ರಾಜ್ ಹಾಗೂ ಗೋವಿಂದರಾಜ್ ಆಯ್ಕೆಯನ್ನು ನಾವು ಖಂಡಿಸುತ್ತೇವೆ. ಹೀಗಾಗಿ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗೆ ಮೀಸಲಾದ ಕುವೆಂಪು ನಗರ ವಾರ್ಡ್, ಲಕ್ಷ್ಮಿ ನಗರ ವಾರ್ಡ್, ಎಚ್‌ಆರ್‌ಬಿಆರ್ ವಾರ್ಡ್ ಹಾಗೂ ಬೇಗೂರು ವಾರ್ಡ್‌ನಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ಮೇಯರ್ ಅಭ್ಯರ್ಥಿಯನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದ ಅವರು, ಸೆ.19 ರಂದು ಈ ಕುರಿತು ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ಹೇಳಿದರು.







