ಬಿಎಂಟಿಸಿಯಲ್ಲಿ ಕಾನೂನು ಕಟ್ಟಳೆಗಿಂತ ಪ್ರೀತಿ ವಿಶ್ವಾಸ ಮುಖ್ಯವಾಗಲಿ: ನಾಗರಾಜ್ ಯಾದವ್
ಬೆಂಗಳೂರು, ಸೆ.23: ಸಾರಿಗೆ ನೌಕರರ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಪ್ರೀತಿ, ವಿಶ್ವಾಸ ಮುಖ್ಯವೇ ಹೊರತು ಕಾನೂನು ಕಟ್ಟಳೆಗಳಲ್ಲ ಎಂದು ಬಿಎಂಟಿಸಿ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಯಾದವ್ ಅಭಿಪ್ರಾಯಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘ ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ 18ನೆ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಎಸೆಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಪಡೆದ ಸಾರಿಗೆ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ಶ್ರೇಷ್ಠ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಸಾಲದಲ್ಲಿ ಮುನ್ನಡೆಯುತ್ತಿರುವ ಬಿಎಂಟಿಸಿಯನ್ನು ಲಾಭದತ್ತ ಕೊಂಡೊಯ್ಯಲು ನೌಕರರು ಹಾಗೂ ಅಧಿಕಾರಿಗಳ ಒಗ್ಗಟ್ಟಿನ ಶ್ರಮ ಅಗತ್ಯವಿದೆ. ಅನಗತ್ಯವಾಗಿ ನಷ್ಟವಾಗುತ್ತಿರುವ ವಿಭಾಗಗಳನ್ನು ಪತ್ತೆ ಹಚ್ಚಿ ಸರಿ ಪಡಿಸಬೇಕಾಗಿದೆ. ಹಾಗೂ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಲು ಉತ್ತಮ ವಾತಾವರಣ ನಿರ್ಮಿಸುವುದು ಸಾರಿಗೆ ಸಂಸ್ಥೆಯ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಬಿಎಂಟಿಸಿ ಸಂಸ್ಥೆಯು ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘಕ್ಕೆ 5ಕೋಟಿ ರೂ. ಹಣ ಕೊಡುವುದು ಬಾಕಿಯಿದೆ. ಇದನ್ನು ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಕೊಡಲಾಗುವುದು. ಸಾರಿಗೆ ಇಲಾಖೆಯ ಸಹಕಾರ ಸಂಘವು ಇತರೆ ಸಹಕಾರ ಸಂಘಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಎಂಟಿಸಿಯಲ್ಲಿ ಸುಮಾರು 36 ಸಾವಿರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲೂ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಅನ್ಯೋನ್ಯತೆಯಿಂದ ಕಾರ್ಯನಿರ್ವಹಿಸಬೇಕಾದರೆ ಸಹಕಾರ ಸಂಘದ ಸ್ಥಾಪನೆ ಅಗತ್ಯವಿತ್ತು. ಹಾಗೂ ನೌಕರರ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಸಹಕಾರ ಸಂಘವು ಶ್ರಮಿಸುತ್ತಿದೆ ಎಂದರು.
ಬಿಎಂಟಿಸಿ ನೌಕರರಿಗೆ ವಾಸಿಸಲು ಯೋಗ್ಯವಾದ ಮನೆ, ಆರೋಗ್ಯ ಹಾಗೂ ನೌಕರರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಬಿಎಂಟಿಸಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಎಲ್ಲ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಬಿ.ಗೋವಿಂದರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜು, ಬಿಎಂಟಿಸಿ ಕಾರ್ಮಿಕ ಕಲ್ಯಾಣಾಧಿಕಾರಿ ವಿಜಯಕುಮಾರ್ ರೈ, ಬಿಎಂಟಿಸಿ ನಿರ್ದೇಶಕ ಆರ್.ಮೂರ್ತಿ, ಬಿಎಂಟಿಸಿ ನೌಕರರ ಪತ್ತಿನ ಸಹಕಾರ ಸಂಘದ ಅಧಕ್ಷ ಎಚ್.ಎಸ್.ಬೋರಲಿಂಗೇಗೌಡ, ಹಿರಿಯ ವೈದ್ಯ ಆಂಜಿನಪ್ಪ ಮತ್ತಿತರರಿದ್ದರು.







