ದೊರೆಸ್ವಾಮಿ ಕರ್ನಾಟಕದ ಗಾಂಧಿ: ನಿಡುಮಾಮಿಡಿ ಸ್ವಾಮೀಜಿ
ಎಚ್.ಎಸ್.ದೊರೆಸ್ವಾಮಿ-100 ಅಭಿನಂದನಾ ಸಮಾರಂಭ
ಬೆಂಗಳೂರು, ಸೆ.23: ಗಾಂಧಿವಾದದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನ್ಯಾಯ, ದಬ್ಬಾಳಿಕೆ, ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕರ್ನಾಟಕದ ಗಾಂಧಿ ಎಂದು ಮಾನವ ಧರ್ಮದ ಪೀಠಾಧ್ಯಕ್ಷ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬಣ್ಣಿಸಿದ್ದಾರೆ.
ಶನಿವಾರ ನಗರದ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ಹನುಮಂತನಗರ ಸಹಕಾರಿ ಬ್ಯಾಂಕ್ ಆಯೋಜಿಸಿದ್ದ ‘ಎಚ್.ಎಸ್.ದೊರೆಸ್ವಾಮಿ 100ರ ಸಂಭ್ರಮ ಅಭಿನಂದನಾ ಸಮಾರಂಭ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಹರ್ಡೇಕರ್ ಮಂಜಪ್ಪ ಅವರು ಕರ್ನಾಟಕದ ಗಾಂಧಿ ಎಂದು ಗುರುತಿಸಿಕೊಂಡಿದ್ದರು. ಸ್ವಾತಂತ್ರಾ ನಂತರ ದಿನಗಳಲ್ಲಿ ಗಾಂಧಿ ಅವರ ನೆಲಮೂಲ ಮೌಲ್ಯಗಳು, ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ, ಕನ್ನಡದ ಸಾಕ್ಷಿ ಪ್ರಜ್ಞೆಯಂತಿರುವ ಎಚ್.ಎಸ್.ದೊರೆಸ್ವಾಮಿ ನಮ್ಮ ಕಾಲದ ಗಾಂಧಿ ಎಂದು ಹೇಳಿದರು.
ದೊರೆಸ್ವಾಮಿ ಅವರಿಗೆ ವಯಸ್ಸು ನೂರಾದರೂ ಹೋರಾಟದ ಕಿಚ್ಚು ಇನ್ನೂ ಕಳೆಗುಂದಿಲ್ಲ. ರಾಜ್ಯದಲ್ಲಿ ಎಲ್ಲೆ ಅನ್ಯಾಯವಾಗಿದೆ ಎಂದು ತಿಳಿದು ಬಂದ ಕೂಡಲೇ, ಆ ಅನ್ಯಾಯವನ್ನು ಖಂಡಿಸಿ ಪ್ರತಿಭಟಿಸುವವರಲ್ಲಿ ದೊರೆಸ್ವಾಮಿ ಮೊದಲಿಗರು. ರೈತರ, ಕಾರ್ಮಿಕರ, ಭೂ ಹೀನರ ಪರ, ಭ್ರಷ್ಟಾಚಾರ, ಭೂ ಕಬಳಿಕೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮೊದಲಿಗೆ ಧ್ವನಿಗೂಡಿಸುತ್ತಾರೆ ಎಂದರು.
ನುಡಿದಂತೆ ನಡೆ ಇಲ್ಲದಿದ್ದರೆ ದೇಶದಲ್ಲಿ ಏನೂ ಪರಿವರ್ತನೆ ಆಗುವುದಿಲ್ಲ. ಪ್ರಬುದ್ಧ ರಾಷ್ಟ್ರ ನಿರ್ಮಾಣವಾಗಬೇಕಾದರೆ ಗಾಂಧಿವಾದದ ಮೌಲ್ಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಗಾಂಧಿ ವೌಲ್ಯಗಳ ಸಾಕಾರಮೂರ್ತಿಯಂತಿರುವ ದೊರೆಸ್ವಾಮಿ ನಮ್ಮೆಲ್ಲರಿಗೂ ಮಾದರಿ ಎಂದು ಹೇಳಿದರು.
ಮನವಿ: ಎಚ್.ಎಸ್.ದೊರೆಸ್ವಾಮಿ ಅವರ 100ರ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರಕಾರ ಸ್ವತಂತ್ರವಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಬೇಕು. ಇದೇ ವರ್ಷದ ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ದೊರೆಸ್ವಾಮಿ ಅವರನ್ನು ರಾಜ್ಯ ಸರಕಾರ ಅಭಿನಂದಿಸಬೇಕು ಎಂದು ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿದ ಬಳಿಕ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸರಕಾರ ಬಡವರಿಗಾಗಿ ಹನುಮಂತನಗರ ಬಡಾವಣೆಯನ್ನು ನಿರ್ಮಾಣ ಮಾಡಿದರು. ಇಲ್ಲಿನ ಬಡವರಿಗಾಗಿ ಸಹಕಾರ ಬ್ಯಾಂಕ್ ತೆರೆಯಲು ಶ್ರಮಪಟ್ಟಿದ್ದೆ, ಅದು ಈಗ ಹೆಮ್ಮರವಾಗಿ ಬೆಳೆದಿದೆ. ಈ ಬ್ಯಾಂಕ್‌ನ ಅಭಿವೃದ್ಧಿಗೆ ನಿರ್ದೇಶಕರು, ಸಿಬ್ಬಂದಿ ವರ್ಗದ ಶ್ರಮ ಕೂಡ ಇದೆ. ಬ್ಯಾಂಕಿನ ಅಡಳಿತದಲ್ಲಿ ತಪ್ಪಾಗಿರಬಹುದು ಆದರೆ ವ್ಯವಹಾರದಲ್ಲಿ ಒಂದು ರೂಪಾಯಿ ದುರ್ಬಳಕೆ ಆಗಿಲ್ಲ ಎಂದರು.
ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆ ಸಿಗದೇ ಇರಬಹುದು. ಆದರೆ ಸುಂದರ, ಭವ್ಯ ಭಾರತ ನಿರ್ಮಣ ಕಟ್ಟುವಂತ ಅವಕಾಶ ನಮಗಿದೆ. ದೇಶದಲ್ಲಿರುವ ಜಾತಿವಾದ, ಭ್ರಷ್ಟಾಚಾರ, ಅಪರಾಧ ಈ ಮೂರು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡೋಣ ಎಂದು ನೀಡಿದರು.
ಈ ವೇಳೆ ಎಚ್.ಎಸ್.ದೊರೆಸ್ವಾಮಿ 100ರ ಸಂಭ್ರಮದ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಡಾ.ವಿ.ಚಾರ್ಲ್ಸ್ ಲೋಬೋ, ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ಡಾ.ಮಹೇಶ್ ಜೋಶಿ, ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಇತರರು ಇದ್ದರು.
ರಾಜ್ಯ ಸರಕಾರ ಎಲ್ಲ ವರ್ಗಗಳ ಜನರ ಪರ ಕೆಲಸ ಮಾಡುತ್ತಿದೆ. ಕೈಗಳಿಗೆ ಅನ್ನ ಕೊಡುವುದರ ಬದಲು ಅನ್ನ ಗಳಿಸುವ ಶಕ್ತಿ ತುಂಬಲು ಭೂರಹಿತರಿಗೆ ಎರಡು ಎಕರೆ ಭೂಮಿ ನೀಡಲಿ.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ







