ಬಿಎಸ್‌ವೈ ಆಪ್ತ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಎಸಿಬಿಗೆ ಆರೆಸ್ಸೆಸ್ ಮಾಜಿ ಪ್ರಚಾರಕ ದೂರು
6 ಕೋಟಿ ರೂ.ಹಣ ಅಕ್ರಮ ಮಂಜೂರು

ಬೆಂಗಳೂರು, ಸೆ. 23: ನೋಂದಣಿಯಾಗದ ಸಂಸ್ಥೆಗೆ ಬಿಜೆಪಿ ಆಡಳಿತಾವಧಿಯಲ್ಲಿ 6 ಕೋಟಿ ರೂ.ಹಣ ಮೀಸಲಿಟ್ಟಿದ್ದು, ಒಂದು ತಿಂಗಳ ಬಳಿಕ ಸಂಸ್ಥೆ ನೋಂದಣಿ ಮಾಡಿ ಕೇವಲ 6 ತಿಂಗಳಲ್ಲಿ 10 ಎಕರೆ ಭೂ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಬಿಎಸ್‌ವೈ ಆಪ್ತ ಹಾಗೂ ಮೇಲ್ಮನೆ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಆರೆಸ್ಸೆಸ್ ನ ಮಾಜಿ ಪ್ರಚಾರಕ ಎನ್.ಹನುಮೇಗೌಡ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಿದ್ದಾರೆ.
‘ಅಧಿಕಾರ ದುರ್ಬಳಕೆ ಮಾಡಿಕೊಂಡು, ಸರಕಾರಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕರ ತೆರಿಗೆ ಹಣವನ್ನು ಕಬಳಿಸುವ ಉದ್ದೇಶದಿಂದಲೇ ಶೈಕ್ಷಣಿಕ ಸಂಸ್ಥೆ ಹೆಸರಿನಲ್ಲಿ ಅಕ್ರಮ ನಡೆಸಲಾಗಿದೆ’ ಎಂದು ಆರೋಪಿಸಿ ಆರೆಸ್ಸೆಸ್ ಮಾಜಿ ಪ್ರಚಾರಕ ಹನುಮೇಗೌಡ ಮತ್ತು ಕೆ.ಎಚ್.ಚಂದ್ರಶೇಖರ್ ಸೆ.15ರಂದು ಎಸಿಬಿಗೆ ದೂರು ಸಲ್ಲಿಸಿದ್ದಾರೆ.
‘ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆ, ಅಂಗವಿಕಲ ಶಾಲೆ, ವಸತಿ ನಿಲಯ, ಆಸ್ಪತ್ರೆ ಮತ್ತು ಸಮುದಾಯ ಭವನ ನಿರ್ಮಿಸಿ ‘ಸಮುದಾಯ’ಕ್ಕೆ ಸೇವೆ ಸಲ್ಲಿಸುವ ನೆಪದಲ್ಲಿ ಅಕ್ರಮ ನಡೆಸಲಾಗಿದೆ. ಸಂಸ್ಥೆ ಅಧ್ಯಕ್ಷರೂ ಆಗಿರುವ ಮೇಲ್ಮನೆ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ತಮ್ಮ ಶಾಸಕರ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ಬೆಂಗಳೂರು ಗ್ರಾ.ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಜಕ್ಕನಹಳ್ಳಿಯ ಸರ್ವೇ ನಂ.183ರಲ್ಲಿ 2.14 ಎಕರೆ ಜಮೀನನ್ನು 71ಲಕ್ಷ ರೂ.ಗೆ ಖರೀದಿಸಿದ್ದು, ಈ ಆಸ್ತಿ ನೋಂದಣಿ ವೇಳೆ ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೆ, ಮೇಲ್ಮನೆ ಸದಸ್ಯರೂ ಆಗಿರುವ ಸಂಸ್ಥೆ ಅಧ್ಯಕ್ಷ ಪುಟ್ಟಸ್ವಾಮಿಯವರು ತಮ್ಮ ಆದಾಯದ ಮೂಲವನ್ನು ತೋರಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂಸ್ಥೆಯೇ ಇಲ್ಲ: ವಿಶ್ವಗಾಣಿಗ ಸಮುದಾಯ ಟ್ರಸ್ಟ್ 2012ರಲ್ಲಿ ಅನುದಾನ ಪಡೆದಿದ್ದು, ಆ ಸಂಸ್ಥೆಯು ಶಿಕ್ಷಣ ಸಂಸ್ಥೆ, ಅಂಗವಿಕಲರ ಶಾಲೆ, ಆಸ್ಪತ್ರೆ ಸೇರಿದಂತೆ ಸಮುದಾಯದ ಯಾವುದೇ ಕಲ್ಯಾಣ ಕಾರ್ಯ-ಚಟುವಟಿಕೆಯನ್ನೂ ನಡೆಯುತ್ತಿಲ್ಲ ಎಂದು ಹಿಂ.ವರ್ಗಗಳ ಕಲ್ಯಾಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಹನುಮೇಗೌಡರಿಗೆ ನೀಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.
ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ಹೋರಾಟ ರೂಪಿಸುತ್ತಿರುವವರು, ತಮ್ಮ ಪಕ್ಷದ ಕೆಲ ಮುಖಂಡರ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳ ಬಗ್ಗೆ ಮೌನ ವಹಿಸಿರುವುದೇಕೆ? ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ದುರ್ಬಳಕೆ ಯಾವ ದೇಶಭಕ್ತಿ ಎಂದು ಉತ್ತರಿಸಬೇಕು.
-ಎನ್.ಹನುಮೇಗೌಡ, ಆರೆಸ್ಸೆಸ್ ಮಾಜಿ ಪ್ರಚಾರಕ







