ನವ ಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು, ಸೆ.23: ರಾಜ್ಯದಲ್ಲಿ ಉತ್ತಮ ವಾತಾವರಣವಿದ್ದು, ನವ ಕರ್ನಾಟಕ ನಿರ್ಮಾಣಕ್ಕೆ ಕಾಂಗ್ರೆಸ್ ಸಿದ್ಧವಿದೆ. ಜನರ ಆಶೀರ್ವಾದ ಪಡೆದು ಮತ್ತೆ ನಾವು ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಶನಿವಾರ ಮಹದೇವಪುರ ವಿಧಾನಸಭಾ ಕ್ಷೇತ್ರದ ಹಗದೂರು ವಾರ್ಡ್‌ನ ರಾಮಗೊಂಡನಹಳ್ಳಿಯಲ್ಲಿ ರಾಜ್ಯ ಸರಕಾರದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸುವ ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2018ರಲ್ಲಿ ಎಪ್ರಿಲ್ ನಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಕಳೆದ ನಾಲ್ಕು ವರ್ಷ ನಾಲ್ಕು ತಿಂಗಳಿನಿಂದ ನಮ್ಮ ಸರಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಪಕ್ಷದಿಂದ ಹೊರ ತಂದಿರುವ ಕಿರು ಹೊತ್ತಿಗೆಯಲ್ಲಿ ಸರಕಾರವು ಬಡವರು, ಹಿಂದುಳಿದವರು, ದಲಿತರು, ಮಹಿಳೆಯರು, ಕಾರ್ಮಿಕರು ಹಾಗೂ ಯುವಕರಿಗೆ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ಬೂತ್ ಮಟ್ಟದ ಕಾರ್ಯಕರ್ತರು, ಏಜೆಂಟರು, ಮತದಾರರ ಮನೆಗೆ ಹೋಗಿ ಈ ಕಿರು ಹೊತ್ತಿಗೆಯನ್ನು ತಲುಪಿಸಿ, ನಾವು ನುಡಿದಂತೆ ನಡೆದಿದ್ದೇವೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಆದರೆ ನಮ್ಮ ಕಾರ್ಯಕರ್ತರು ಸುಳ್ಳು ಹೇಳುವ ಅಗತ್ಯವಿಲ್ಲ. ನಾವು ಮಾಡಿರುವ ಕೆಲಸವನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸಿದರೆ ಸಾಕು ಎಂದು ನುಡಿದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 1.10 ಕೋಟಿ ಕುಟುಂಬಗಳಿಗೆ ಉಚಿತ ಅಕ್ಕಿ ನೀಡುತ್ತಿದ್ದೇವೆ. ಅಕ್ಟೋಬರ್ ತಿಂಗಳಲ್ಲಿ ಇನ್ನು 15 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ. ಒಟ್ಟಾರೆಯಾಗಿ 1.25 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ. ರಾಜ್ಯದ 6.50 ಕೋಟಿ ಜನರು ಒಂದಲ್ಲ ಒಂದು ರೀತಿಯಲ್ಲಿ ಸರಕಾರದ ಸೌಲಭ್ಯವನ್ನು ಪಡೆದಿದ್ದಾರೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ರೈತರಿಗೆ ಪ್ರತೀ ಲೀಟರ್ ಹಾಲಿಗೆ 5 ರೂ.ಸಹಾಯ ಧನ ನೀಡುವ ಕ್ಷೀರಧಾರೆ, 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ, ಮೈತ್ರಿ, ಮನಸ್ವಿನಿ, ವಿದ್ಯಾಸಿರಿ, ಆರೋಗ್ಯ ಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ರಾಜ್ಯ ಸರಕಾರ ನೀಡಿದೆ ಎಂದ ಅವರು, ಪ್ರಧಾನಿ ನರೇಂದ್ರಮೋದಿ ‘ಸಬ್‌ಕಾ ಸಾಥ್, ಸಬ್ ಕಾ ವಿಕಾಸ್’ ಎನ್ನುತ್ತಾರೆ. ಆದರೆ, ಅವರ ಆಡಳಿತದಲ್ಲಿ ಕೇವಲ ಬಂಡವಾಳಶಾಹಿಗಳ ವಿಕಾಸ ಆಗಿದೆಯೆ ಹೊರತು, ಬಡವರ ವಿಕಾಸವಾಗಿಲ್ಲ. ಅದರ ಬದಲು, 120 ಮಂದಿ ಅಮಾಯಕರು ತಮ್ಮ ಜೀವವನ್ನು ಕಳೆದುಕೊಳ್ಳುವಂತಾಯಿತು ಎಂದು ವಾಗ್ದಾಳಿ ನಡೆಸಿದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ಕೇವಲ 100 ದಿನಗಳಲ್ಲಿ ಭಾರತಕ್ಕೆ ತಂದು ಪ್ರತಿಯೊಬ್ಬ ಬಡವನ ಖಾತೆಗೂ 15 ಲಕ್ಷ ರೂ. ಹಂಚುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಆದರೆ, ಈವರೆಗೆ ಅಂತಹ ಪ್ರಯತ್ನವಾಗಿಲ್ಲ. ಮೋದಿ ಅವರು ಕೇವಲ ಮಾತಿನಲ್ಲಿ ಮೋಡಿ ಮಾಡುವುದು, ವಿಮಾನದಲ್ಲಿ ವಿದೇಶಗಳನ್ನು ಸುತ್ತುವುದು ಮಾತ್ರ ಗೊತ್ತು ಎಂದು ಅವರು ಕಿಡಿಕಾರಿದರು.
ಯೂಟರ್ನ್ ಮೋದಿ: ಜಿಎಸ್‌ಟಿ, ಆಧಾರ್, ಎಫ್‌ಡಿಐಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ, ಈಗ ಅದೇ ಯೋಜನೆಗಳನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅನಿಲ ಸಬ್ಸಿಡಿ ಕಡಿತಗೊಳಿಸಲಾಗಿದೆ. ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 45 ರೂ.ಗಳಾದರೂ ಪೆಟ್ರೋಲ್ ಬೆಲೆ 72 ರೂ. ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನ ಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರ ನಿರ್ಮಲ ಭಾರತ್ ಯೋಜನೆ ಜಾರಿಗೆ ತಂದು ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಆ ಯೋಜನೆಗೆ ಸ್ವಚ್ಛ ಭಾರತ್ ಎಂದು ಮರುನಾಮಕರಣ ಮಾಡಿ, ಪೊರಕೆ ಹಿಡಿದು ಫೋಟೊಗೆ ಪೋಸ್ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ನಮ್ಮದು ಕಾಮ್ ಕೀ ಬಾತ್
ಪ್ರಧಾನಿ ನರೇಂದ್ರ ಮೋದಿ ಅವರದ್ದು ಮನ್ ಕೀ ಬಾತ್. ಆದರೆ, ನಮ್ಮದು ಕಾಮ್ ಕೀ ಬಾತ್. ಅವರು ಮಾತನಾಡಿಕೊಂಡಿರಲಿ, ನಾವು ಕೆಲಸ ಮಾಡಿದ್ದೇವೆ. ಅದಕ್ಕಾಗಿ ಜನರ ಬಳಿ ಕೂಲಿ ಕೇಳ ಬೇಕಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು ಕೇಳಿದ್ದ ಕೂಲಿಗೆ ಅಲ್ಲಿನ ಮತದಾರರು ಎರಡು ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟರು.
-ಸಿದ್ದರಾಮಯ್ಯ, ಮುಖ್ಯಮಂತ್ರಿ







