ಸುಪ್ರೀಂ ಆದೇಶ ಪ್ರತಿ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡುವೆ: ಎಚ್.ಡಿ.ದೇವೇಗೌಡ
ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ

ಬೆಂಗಳೂರು, ಸೆ.23: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ಆದೇಶದ ಪ್ರತಿ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶನಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿರುವ ನಾಲ್ಕು ರಾಜ್ಯಗಳಿಗೂ ಲಿಖಿತ ಹೇಳಿಕೆ ಸಲ್ಲಿಸಲು ನ್ಯಾಯಾಲಯ ಹೇಳಿದೆ. ನಾನು ಈ ಸಂಬಂಧ ಕಾನೂನು ಪಂಡಿತರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.
ಮಹಾದಾಯಿ ವಿಚಾರದಲ್ಲಿ ಯಾರನ್ನು ಬೇಕಾದರೂ ಭೇಟಿ ಮಾಡಲು ಸಿದ್ಧ. ಈಗಾಗಲೇ ನಾನು ಪ್ರಧಾನಿಯನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅಗತ್ಯವಿದ್ದಲ್ಲಿ ಮತ್ತೊಮ್ಮೆ ಯಾರನ್ನು ಬೇಕಾದರೂ ಭೇಟಿಯಾಗುತ್ತೇನೆ. ಜೆಡಿಎಸ್ ಪಕ್ಷಕ್ಕೆ ತಂತ್ರಗಾರಿಕೆ ಮಾಡಿ ಅಭ್ಯಾಸವಿಲ್ಲ. ನಾವೆಲ್ಲ ಕಷ್ಟಪಟ್ಟು ಕೆಲಸ ಮಾಡುವವರು. ಫಲ ಕೊಡುವ ಮಹಾನುಭಾವ ಮೇಲಿದ್ದಾನೆ. ಮುಂಬರುವ ವಿಧಾನಸಭೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಈಗಲೇ ಯಾವುದೆ ನಿರ್ಧಾರ ಮಾಡುವುದಿಲ್ಲ. ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಚೇತರಿಸಿಕೊಂಡ ನಂತರ ಪಟ್ಟಿ ಬಿಡುಗಡೆ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ವೈದ್ಯರು ಕುಮಾರಸ್ವಾಮಿಗೆ 15-20 ದಿನ ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದಾರೆ. ವಿಶ್ರಾಂತಿ ಬಳಿಕ ಅವರು ರಾಜ್ಯ ಪ್ರವಾಸ ಕೈಗೊಳ್ಳುತ್ತಾರೆ. ಉತ್ತರ ಕರ್ನಾಟಕದಿಂದ ಅವರು ಸ್ಪರ್ಧಿಸುವ ಸಮಯ ಬಂದಾಗ ಅದರ ಬಗ್ಗೆ ಯೋಚನೆ ಮಾಡೋಣ ಎಂದು ಪ್ರಶ್ನೆಯೊಂದಕ್ಕೆ ದೇವೇಗೌಡ ಉತ್ತರಿಸಿದರು.
ಕುಮಾರಸ್ವಾಮಿಗೆ ರಾಮನಗರ ಕ್ಷೇತ್ರ ಮೂಲ ಸ್ಥಾನ ಇದೆ. ಈ ವಿಚಾರದಲ್ಲಿ ಪೈಪೋಟಿ ಮಾಡೋದು ಸರಿಯಲ್ಲ. ನಾನು ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿ ಆದೆ. ನಾನು ಹಳೆ ಮೈಸೂರು ಪ್ರಾಂತದಿಂದ ಮಾತ್ರ ಮುಖ್ಯಮಂತ್ರಿ ಆಗಲಿಲ್ಲ. ಇಡೀ ರಾಜ್ಯದ ಜನ ಜೆಡಿಎಸ್‌ಗೆ ಮತ ಹಾಕಿ ಗೆಲ್ಲಿಸಿದರು. ಆಗ ನಮಗೆ 115 ಸ್ಥಾನಗಳು ಬಂದಿದ್ದು ಎಂದು ಅವರು ಸ್ಮರಿಸಿಕೊಂಡರು.
ಸೆಪ್ಟೆಂಬರ್ 25 ರಿಂದ ನಾನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದೇನೆ. ನಾಲ್ಕು ದಿನಗಳ ಕಾಲ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಆನಂತರ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ದೇವೇಗೌಡ ತಿಳಿಸಿದರು.







