ನಿಯಮ ಬದಲಾವಣೆಗೆ ಚಿಂತನೆ: ಸಚಿವ ಎಂ.ಆರ್.ಸೀತಾರಾಂ
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಪ್ರಕೃತಿ ವಿಕೋಪ ಪರಿಹಾರಕ್ಕೂ ಬಳಕೆ
ಬೆಂಗಳೂರು, ಸೆ. 23: ವೆಚ್ಚವಾಗದೆ ಉಳಿದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಪ್ರಕೃತಿ ವಿಕೋಪಗಳ ತುರ್ತು ಸಂದರ್ಭಗಳಲ್ಲಿ ಪರಿಹಾರ ನೀಡಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಈ ಸಂಬಂಧ ನಿಯಮಗಳ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.
ಡಾ.ನಂಜುಂಡಪ್ಪ ವರದಿಯನ್ವಯ ವಿಶೇಷಾಭಿವೃದ್ಧಿ ಯೋಜನೆಯಡಿ ರಾಜ್ಯದ 114 ತಾಲೂಕುಗಳಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಹಂಚಿಕೆಯಾಗಿದೆ. ಆದರೆ, ಆ ಅನುದಾನ ಕೆಲ ತಾಲೂಕುಗಳಲ್ಲಿ ಸದ್ಬಳಕೆಯಾಗಿಲ್ಲ. ಕೆಲ ತಾಲೂಕುಗಳಲ್ಲಿ ಉಳಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
2002ರಿಂದ 2012ರ ನಡುವೆ ಬಳಕೆಯಾಗದ ಉಳಿದ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ದಕ್ಷಿಣ ಕನ್ನಡದಲ್ಲಿ 1.40 ಕೋಟಿ ರೂ. ಶಿವಮೊಗ್ಗದಲ್ಲಿ 4.30 ಕೋಟಿ ರೂ.ಅನುದಾನ ಖರ್ಚಾಗದೆ ಉಳಿದಿದೆ. ಹೀಗೆ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸುಮಾರು 50 ಕೋಟಿ ರೂ.ಗಳಷ್ಟು ಅನುದಾನ ಸದ್ಬಳಕೆಯಾಗಿಲ್ಲ. ಆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ವನ್ಯಜೀವಿಗಳಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ, ಬೆಂಕಿ ಅನಾಹುತಗಳಿಂದ ನಷ್ಟಕ್ಕೆ ಒಳಗಾದವರಿಗೆ, ನೆರೆ-ಬರ ಸೇರಿ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಪರಿಹಾರ ನೀಡಲು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ಏಳು ವರ್ಷಗಳಿಂದ ವಾರ್ಷಿಕ 3 ಸಾವಿರ ಕೋಟಿ ರೂ.ಗಳಂತೆ ಆಯವ್ಯಯದಲ್ಲಿ ಸರಕಾರ ಹಿಂದುಳಿದ ತಾಲೂಕುಗಳಿಗೆ ಅನುದಾನ ಮೀಸಲಿಟ್ಟಿದ್ದು, ಅದನ್ನು 25 ಇಲಾಖೆಗಳಿಗೂ ಹಂಚಿಕೆಯಾಗುತ್ತಿದ್ದು, ಸಮರ್ಪಕ ಬಳಕೆಯಾಗಿಲ್ಲ. ಹೀಗಾಗಿ ಎಲ್ಲ ಇಲಾಖೆಗಳಿಗೂ ಹಂಚಿಕೆ ಮಾಡುವ ಬದಲಿಗೆ ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲ ಹಾಗೂ ಶಿಕ್ಷಣ ಇಲಾಖೆಗೆ ಆದ್ಯತೆ ಮೇಲೆ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದ ಅವರು, ಹೀಗಾಗಿ ಶಾಸಕರೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಲು ಪತ್ರ ಬರೆದಿದ್ದು, ಹೊಸ ನಿಯಮಾವಳಿಯನ್ವಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕುಡಿಯುವ ನೀರಿಗೆ 2ಕೋಟಿ ರೂ., ಜಲಸಂಪನ್ಮೂಲ ಇಲಾಖೆಗೆ 1 ಕೋಟಿ ರೂ. ಹಾಗೂ ಶಿಕ್ಷಣ ಇಲಾಖೆಗೆ 50ಲಕ್ಷ ರೂ.ನಂತೆ ಹಿಂದುಳಿದ ತಾಲೂಕುಗಳ ಶಾಸಕರ ಕ್ಷೇತ್ರಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಮೀಸಲಿಟ್ಟ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಅನುದಾನವನ್ನು ಬಳಸಿಕೊಳ್ಳದಿದ್ದರೆ ಬೊಕ್ಕಸಕ್ಕೆ ವಾಪಸ್ ಹೋಗಲಿದ್ದು, ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಂದಿನ ಆಯವ್ಯಯದಲ್ಲಿ ಆದ್ಯತಾ ಇಲಾಖೆಗಳಿಗಷ್ಟೆ ಅನುದಾನ ಹಂಚಿಕೆಗೆ ಮಾಡಲಾಗುವುದು ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಸಂಬಂಧ ಈಗಾಗಲೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾತುಕತೆ ಪೂರ್ಣ ಗೊಂಡಿದೆ. ಕಾಂಗ್ರೆಸ್-ಮೇಯರ್ ಸ್ಥಾನ, ಜೆಡಿಎಸ್-ಉಪ ಮೇಯರ್ ಸ್ಥಾನಕ್ಕೆ ಸಮ್ಮತಿಸಿದ್ದು, ಶೀಘ್ರದಲ್ಲೆ ಮೇಯರ್ ಆಯ್ಕೆ ನಡೆಯಲಿದೆ. ಹಿರಿತನ ಆಧಾರದ ಮೇಲೆ ಮೇಯರ್ ಆಯ್ಕೆ ನಡೆಯಲಿದೆ.
-ಎಂ.ಆರ್.ಸೀತಾರಾಂ ಯೋಜನೆ, ಸಾಂಖ್ಯಿಕ ಸಚಿವ







