ಗಡಿಯಲ್ಲಿ ಪಾಕಿಸ್ತಾನದಿಂದ ಶೆಲ್, ಗುಂಡಿನ ದಾಳಿ: ಇಬ್ಬರು ಬಿಎಸ್‌ಎಫ್ ಯೋಧರ ಸಹಿತ 7 ಮಂದಿಗೆ ಗಾಯ

ಜಮ್ಮು, ಸೆ. 23: ಭಾರತೀಯ ಗಡಿಯ ಹೊರಠಾಣೆ ಹಾಗೂ ಜಮ್ಮು, ಸಾಂಬಾ ಹಾಗೂ ಪೂಂಛ್ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಶೆಲ್ ಹಾಗೂ ಗುಂಡು ಹಾರಿಸಿದ ಪರಿಣಾಮ ಇಬ್ಬರು ಗಡಿ ಭದ್ರತಾ ಪಡೆಯ ಯೋಧರು ಹಾಗೂ ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಗಡಿ ರೇಖೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿರುವುದರಿಂದ ಗಡಿಯಲ್ಲಿರುವ ನೂರಾರು ನಾಗರಿಕರು ಮನೆ ಬಿಟ್ಟು ಪಲಾಯನ ಮಾಡುತ್ತಿದ್ದಾರೆ.
ಜಮ್ಮು ಹಾಗೂ ಸಾಂಬಾ ಜಿಲ್ಲೆಯಲ್ಲಿರುವ ಐಬಿಯೊಂದಿಗೆ ಅರ್ನಿಯಾ, ಆರ್.ಎಸ್. ಪುರ, ರಾಮಗಡ ವಲಯದ ಹೊರ ಠಾಣೆ, ಗ್ರಾಮಗಳ ಮೇಲೆ ಪಾಕಿಸ್ತಾನ ಸೇನೆ ನಿನ್ನೆ ಸಂಜೆಯಿಂದ ತೀವ್ರ ಶೆಲ್, ಗುಂಡಿನ ದಾಳಿ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ಎಸ್. ಪುರ ವಲಯದ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ನಿಯಾ ಜಿಲ್ಲೆಯ ತ್ರೇವಾದಲ್ಲಿ ಇನ್ನೋರ್ವ ನಾಗರಿಕ ಗಾಯಗೊಂಡಿದ್ದಾನೆ. ಸಾಂಬಾ ರಾಮಗಡ ವಲಯದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ 20 ಗ್ರಾಮಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ ಗಡಿಯ ಕೆಲವು ಗ್ರಾಮಗಳನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದರಿಂದ 500ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ.







