ಉಡುಪಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ಗೆ ಚಾಲನೆ

ಉಡುಪಿ, ಸೆ.23: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಮನೆ ಮನೆಗೆ ಕಾಂಗ್ರೆಸ್’ನ ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನರ್‌ಪಾಡಿಯ ಲೇಬರ್ ಕಾಲನಿಯಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದ ಬಳಿಕ ಸಚಿವ ಪ್ರಮೋದ್ ಮಧ್ವರಾಜ್ ಅವರು ಲೇಬರ್ ಕಾಲನಿಯ ಮನೆಗಳಿಗೆ ತೆರಳಿ ರಾಜ್ಯ ಸರಕಾರದ ಸಾಧನೆಗಳ ಮಾಹಿತಿಯನ್ನೊಳ ಗೊಂಡ ಕಿರುಹೊತ್ತಿಗೆಗಳನ್ನು ಮನೆಯ ಸದಸ್ಯರಿಗೆ ನೀಡಿದರು. ಅಲ್ಲದೆ ಪ್ರತಿ ಮನೆಗಳಿಗೆ ಮನೆ ಮನೆ ಕಾಂಗ್ರೆಸ್ ಸ್ಟಿಕ್ಕರ್‌ಗಳನ್ನು ಅಂಟಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ವಿವಿಧ ಸಾಧನೆಗಳ ಬಗ್ಗೆ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಗಳನ್ನು ಪಕ್ಷದ ನಾಯಕರು ವಿಧಾನ ಸಭಾ ಕ್ಷೇತ್ರದ ಎಲ್ಲಾ 209 ಬೂತ್‌ಗಳ ವ್ಯಾಪ್ತಿಯ ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ. ಮತಗಟ್ಟೆ ಸಮಿತಿ ಸದಸ್ಯರು ತಂಡಗಳಾಗಿ ಪ್ರತಿ ದಿನ 10ರಿಂದ 15 ಮನೆಗಳಿಗೆ ತೆರಳಿ ಕರಪತ್ರ ಮತ್ತು ಕಿರುಹೊತ್ತಿಗೆಗಳನ್ನು ಹಂಚಲಿದ್ದಾರೆ.
ಒಂದು ವಾರ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಂಘಟನೆಗೆ ಬಲ ತುಂಬಲು ಉದ್ದೇಶಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ವೈಫಲ್ಯಗಳನ್ನು ಸಹ ಜನರಿಗೆ ತಲುಪಿಸುವ ಉದ್ದೇಶದಿಂದ ಮುದ್ರಿಸಿದ ಕರಪತ್ರಗಳನ್ನು ಪ್ರತಿ ಮನೆಗೆ ತಲುಪಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಸವರಾಜು, ವೆರೋನಿಕಾ ಕರ್ನೇಲಿಯೊ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಜನಾರ್ದನ ಭಂಡಾರ್‌ಕರ್, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನರಸಿಂಹಮೂರ್ತಿ, ದಿನೇಶ್ ಪುತ್ರನ್, ನೀರಜ್ ಪಾಟೀಲ್, ನಾರಾಯಣ ಕುಂದರ್, ಅಶೋಕ್ ಕುಮಾರ್ ಕೊಡವೂರು, ದಿವಾಕರ ಕುಂದರ್ ಮುಂತಾದವರು ಉಪಸ್ಥಿತರಿದ್ದರು.







