ಅತ್ಯಾಚಾರ ಪ್ರಕರಣ: ನಿರ್ಮಾಪಕ ಕರೀಮ್ ಮೊರಾನಿ ಶರಣು

ಹೈದರಾಬಾದ್, ಸೆ. 23: ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಗಂಟೆಗಳ ಬಳಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ ಶನಿವಾರ ಪೊಲೀಸರ ಮುಂದೆ ಶರಣಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ಹಯಾತ್‌ನಗರ್ ಪೊಲೀಸ್ ಠಾಣೆಯಲ್ಲಿ ಕರೀಮ್ ಮೊರಾನಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆನ್ನೈ ಎಕ್ಸ್‌ಪ್ರೆಸ್ ನಿರ್ಮಾಪಕ ಮೊರಾನಿ ಅವರನ್ನು ಆನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ದಿಲ್ಲಿ ಮೂಲದ ಮಹಿಳೆಯೋರ್ವರನ್ನು ಅತ್ಯಾಚಾರ ಎಸಗಿದ ಆರೋಪವನ್ನು ಮೊರಾನಿ ಎದುರಿಸುತ್ತಿದ್ದಾರೆ. ಚಲನಚಿತ್ರದಲ್ಲಿ ನಟಿಸುವ ಆಕಾಂಕ್ಷೆ ಹೊಂದಿದ್ದ 25 ವರ್ಷದ ನಟಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುವ ಬೆದರಿಕೆ ಒಡ್ಡಿ ಮೊರಾನಿ ನಟಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಪೊಲೀಸರು ಮೊರಾನಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಜಾಮೀನು ಅರ್ಜಿ ತಿರಸ್ಕರಿಸಿ ಹೈದರಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಮೊರಾನಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮೊರಾನಿ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದ ಸತ್ರ ನ್ಯಾಯಾಲಯದ ತೀರ್ಪನ್ನು ಉಚ್ಚ ನ್ಯಾಯಾಲಯ ಸೆ. 5ರಂದು ಎತ್ತಿ ಹಿಡಿದಿತ್ತು.





