ಮಡಿವಾಳರಿಗೆ ರಾಜಕೀಯ ಪ್ರಾತಿನಿಧ್ಯ ನೀಡದಿದ್ದರೆ ಚುನಾವಣೆ ಬಹಿಷ್ಕಾರ
ಬೆಂಗಳೂರು, ಸೆ. 23: ರಾಜ್ಯದಲ್ಲಿ ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಡಿವಾಳ ಸಮುದಾಯಕ್ಕೆ ಸರಿಯಾದ ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಅಖಿಲ ಭಾರತೀಯ ರಜಕ(ಮಡಿವಾಳ) ಮಹಾ ಸಭಾ ಎಚ್ಚರಿಕೆ ನೀಡಿದೆ.
ಶನಿವಾರ ನಗರದ ಅರಮನೆ ಮೈದಾನ ರಸ್ತೆಯಲ್ಲಿರುವ ಕೊಂಡಜ್ಜಿ ಸಭಾಂಗಣದಲ್ಲಿ ಅಖಿಲ ಭಾರತ ರಜಕ(ಮಡಿವಾಳ) ಮಹಾ ಸಭಾದಿಂದ ಹಮ್ಮಿಕೊಂಡಿದ್ದ, ರಾಷ್ಟ್ರಮಟ್ಟದ ಸಮಾವೇಶದಲ್ಲಿ ರಾಷ್ಟ್ರದ ಮಡಿವಾಳ ಸಮುದಾಯದ ಮುಖಂಡರು ಮಾತನಾಡಿ, ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದರು.
ಮಹಾಸಭಾದ ಮುಖಂಡ ರಾಜು ಕಲ್ಲೂರು ಮಾತನಾಡಿ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ನಿರ್ಣಾಯಕ ಮತ ಕ್ಷೇತ್ರಗಳನ್ನು ಮಡಿವಾಳ ಸಮುದಾಯ ಹೊಂದಿದೆ. ಈ ನಿಟ್ಟಿನಲ್ಲಿ ಈ ಬಾರಿ ಎಲ್ಲ ಪಕ್ಷಗಳೂ ಮಡಿವಾಳರಿಗೆ ಸೂಕ್ತವಾದ ರಾಜಕೀಯ ಸ್ಥಾನಮಾನ ನೀಡಬೇಕು. ಜೊತೆಗೆ, ಅಸ್ಸಾಂ, ಮಣಿಪುರ, ಮೇಘಾಲಯ, ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ನಮ್ಮನ್ನು ಪರಿಶಿಷ್ಟರು ಎಂದು ಪರಿಗಣಿಸಬೇಕು. ಈ ಮೂಲಕ ನಮ್ಮ ಸಮುದಾಯದ ಬಹು ದಿನಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಕಟ್ಟಡ ಕಾರ್ಮಿಕರು, ಹೊಟೇಲ್ ಕಾರ್ಮಿಕರು ಸೇರಿದಂತೆ ಬೇರೆ ಬೇರೆ ವಲಯದಲ್ಲಿ ಕಾರ್ಮಿಕರಂತೆ ಮಡಿವಾಳರು ದುಡಿಯುತ್ತಾರೆ. ಆದರೆ, ಮಡಿವಾಳರು ನಿರೀಕ್ಷಿತ ಮಟ್ಟದಲ್ಲಿ ಸರಕಾರದಿಂದ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿಲ್ಲ. ಕಾರ್ಮಿಕ ಇಲಾಖೆಯಿಂದಲೂ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಡಿವಾಳರಿಗೆ ಸರಿಯಾದ ರಾಜಕೀಯ ಮೀಸಲಾತಿ ಸಿಗದ ಪರಿಣಾಮ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಡಿವಾಳರಿದ್ದರೂ, ಇದುವರೆಗೂ ಒಬ್ಬರೂ ಜಿಲ್ಲಾ, ತಾಲ್ಲೂಕು ಪಂಚಾಯತ್‌ನಲ್ಲಿ ನಿರ್ಣಾಯಕ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದುದರಿಂದ ನಮ್ಮ ಸಮುದಾಯ ಅಭಿವೃದ್ಧಿಯಾಗಬೇಕಾದರೆ ನಮಗೆ ರಾಜಕೀಯ ಮೀಸಲಾತಿ ಬೇಕಿದೆ ಎಂದು ಪ್ರತಿಪಾದಿಸಿದರು.
ಆಂಧ್ರಪ್ರದೇಶ ಮೂಲದ ನ್ಯಾಯಾಧೀಶ ಶಿವಶಂಕರ್ ಮಾತನಾಡಿ, ಮಡಿವಾಳ ಸಮುದಾಯವರು ಸ್ವಾಭಿಮಾನಿಗಳಾಗಿದ್ದು, ಸ್ವಯಂ ಉದ್ಯೋಗದಿಂದ ಜೀವನ ಕಂಡುಕೊಂಡಿದ್ದಾರೆ. ಆದರೆ, ಅವರು ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಸರಕಾರಗಳು ಅವರ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಅಗತ್ಯವಿದೆ ಎಂದರು.
ಇದೇ ವೇಳೆ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾವೇಶದಲ್ಲಿ ಶಾಸಕ ಅಶ್ವತ್ಥ್ ನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯ ತ್ರಿಲೋಕ್ ರಾಮ್, ಚಿತ್ರದುರ್ಗದ ಬಂಜಾರ ಪೀಠಾಧ್ಯಕ್ಷ ಸರ್ದಾರ್ ಸರ್ವಲಾಲ್ ಸ್ವಾಮೀಜಿ, ಜಿ.ಗೋವಿಂದ್ ಸ್ವಾಮಿ, ಮುತ್ತು ಕುಮಾರ್, ಓಂಪ್ರಕಾಶ್ ಉಪಸ್ಥಿತರಿದ್ದರು.







