ಹಾಫೀಝ್ ಸಯೀದ್, ಪಾಕಿಸ್ತಾನ ಹವಾಲಾ ನಿರ್ವಾಹಕರೊಂದಿಗೆ ಸಂಪರ್ಕ ಒಪ್ಪಿಕೊಂಡ ಪತ್ಯೇಕತಾವಾದಿ ನಾಯಕ ಶಬೀರ್ ಶಾ

ಹೊಸದಿಲ್ಲಿ, ಸೆ. 23: ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಕಪ್ಪು ಹಣ ಬಿಳುಪು ಮಾಡುವ ಪಾಕಿಸ್ತಾನದಲ್ಲಿರುವ ಹವಾಲಾ ನಿರ್ವಾಹಕರೊಂದಿಗೆ ಸಂಪರ್ಕ ಇರುವುದನ್ನು ಪತ್ಯೇಕತಾವಾದಿ ನಾಯಕ ಶಬೀರ್ ಶಾ ಒಪ್ಪಿಕೊಂಡಿದ್ದಾರೆ. 26/11 ದಾಳಿಯ ರೂವಾರಿ ಹಾಫೀಝ್ ಸಯೀದ್‌ನೊಂದಿಗೆ ನಿರಂತರ ಸಂಪರ್ಕವಿರುವುದನ್ನು ಕೂಡ ಒಪ್ಪಿಕೊಂಡಿದ್ದಾರೆ ಹಾಗೂ ಲಷ್ಕರೆ-ತಯ್ಯಿಬದ ಸ್ಥಾಪಕನೊಂದಿಗೆ ಈ ವರ್ಷ ಜನವರಿಯಲ್ಲಿ ಮಾತನಾಡಿರುವುದಾಗಿ ತಿಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಹವಾಲಾ ನಿರ್ವಾಹಕರಿಗೆ ಶೇ. 3 ಕಮಿಷನ್ ನೀಡುತ್ತಿರುವುದನ್ನು ಶಾ ಒಪ್ಪಿಕೊಂಡಿದ್ದಾರೆ. ಶಾ ಅವರ ಡೆಮಾಕ್ರೆಟಿಕ್ ಪಾರ್ಟಿ ಪೇಶಾವರದಲ್ಲಿ ನೋಂದಣಿಯಾಗಿದೆ. ಆದರೆ, ಆ ರಾಜಕೀಯ ಪಕ್ಷದ ಮಾಹಿತಿ ವಿಭಾಗ ಇರುವುದು ರಾವಲ್ ಪಿಂಡಿಯಲ್ಲಿ ಎಂಬುದು ಪತ್ತೆಯಾಗಿದೆ.
ಶಾ ಕೊಡುಗೆಯನ್ನು ನಗದು ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. ಆದರೆ, ಅವರು ತೆರಿಗೆ ಪಾವತಿಸುತ್ತಿರಲಿಲ್ಲ. ಕೊಡುಗೆಗೆ ಯಾವುದೇ ರಸೀದಿ ನೀಡುತ್ತಿರಲಿಲ್ಲ. ಅವರಿಗೆ ನಿಯಮಿತ ಆದಾಯ ಇರಲಿಲ್ಲ ಎಂದು ಆರೋಪ ಪಟ್ಟಿ ಹೇಳಿದೆ.
ತನಿಖಾ ಸಂಸ್ಥೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಶನಿವಾರ ಮಧ್ಯಾಹ್ನ ಆರೋಪ ಪಟ್ಟಿ ಸಲ್ಲಿಸಿದೆ.







