ಗೋ ರಾಜಕಾರಣವೇ ಬಿಜೆಪಿಯ ಕೆಲಸ: ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಸೆ.23: ‘ಕುರಿಮಾಂಸ ತಿನ್ನುವಾಗ ಏನೂ ಇಲ್ಲ. ಕಾಡು ಹಂದಿ ತಿನ್ನುವಾಗ ಏನೂ ಇಲ್ಲ. ಆದರೆ ಗೋ ಎಂದ ಕೂಡಲೇ ಬಿಜೆಪಿಯವರು ಹುಚ್ಚರ ರೀತಿಯಲ್ಲಿ ಆಡುತ್ತಾರೆ. ನಾನು ಗೋ ಮಾಂಸ ತಿಂದ್ದಿದ್ದೇನೆ ಏನಾಯಿತಿಗಾ’ ಆದರೆ, ದೇಶದಲ್ಲಿ ಬಿಜೆಪಿ ಪಕ್ಷ ಈ ವಿಷಯವನ್ನೇ ದೊಡ್ಡದಾಗಿ ಮಾಡಿ ಗೋ ರಾಜಕಾರಣ ನಡೆಸುತ್ತಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಶನಿವಾರ ಮಧ್ಯಾಹ್ನ ಸ್ಥಳೀಯ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ನಡಿಗೆ ಮರಳಿ ಜನರ ಕಡೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆ ಬಿಜೆಪಿಯ ವಿರುದ್ಧ್ದ ಕಾಗೋಡು ತಿಮ್ಮಪ್ಪತಮ್ಮದೆ ಆದ ಶೈಲಿಯಲ್ಲಿ ತೀವ್ರ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡರು.
‘ಜನರಿಗೆ ಧರ್ಮ ಹೇಳಿ, ಗೋ ಹೇಳಿ ಎನ್ನುತ್ತಾರೆ’ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ ಅವರು, ಈ ಹಿಂದೆ ಸಾಗರ ಪಟ್ಟಣದಲ್ಲಿ ನಡೆದ ಗಣಪತಿ ವಿಸರ್ಜನೆಯ ಗಲಾಟೆ ಪ್ರಕರಣವೊಂದನ್ನು ಪ್ರಸ್ತಾಪಿಸಿದರು. ‘ಗಣಪತಿ ವಿಸರ್ಜನೆಯ ವೇಳೆ ಹೊಡೆದಾಟ ಮಾಡಿಕೊಂಡರು. ತಿಮ್ಮಪ್ಪ ಆಯ್ಕೆಯಾಗಿ ಬಂದರೆ ಗಣಪತಿ ತರಲು ಬಿಡುವುದಿಲ್ಲ ಎಂದು ಊರು ತುಂಬ ಹೇಳಿದರು. ನಾನು ಹುಡುಗನಿದ್ದಾಗ ನನ್ನ ಅಕ್ಕ ಗಣಪತಿ ನೋಡಲು ನನ್ನನ್ನು ಸಾಗರಕ್ಕೆ ಕರೆತರುತ್ತಿದ್ದರು. ಜನರ ಮಧ್ಯದಲ್ಲಿ ಜಾತಿ ಹೇಳಿ, ಧರ್ಮ ಹೇಳಿ, ಭಾಷಣ ಮಾಡಿ ಒಡೆದಾಳುವುದು ಬಹಳ ಸುಲಭ. ಆದರೆ ಎಲ್ಲರೂ ಒಗ್ಗಟ್ಟಾಗಿದ್ದುಕೊಂಡು ಹೋಗುವುದೆ ಮುಖ್ಯವಾದುದು’ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ರೈತರ ಶ್ರೇಯೋಭಿವೃದ್ಧಿಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಲೋಕಸಭೆಯಲ್ಲಿ ಒಮ್ಮೆಯೂ ರೈತರ ಬಗ್ಗೆ ಮಾತನಾಡಲಿಲ್ಲ. ಅರಣ್ಯ ಹಕ್ಕು ಕಾಯ್ದೆಯ ನಿಯಾಮಾವಳಿ ಸಡಿಲಿಕೆಗೆ ಕ್ರಮಕೈಗೊಳ್ಳಲಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಅವರು, ಯಾವುದೇ ಜನಪರ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ವರ ಏಳ್ಗೆಗೆ ಶ್ರಮಿಸುತ್ತಿದೆ. ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಸೇರಿದಂತೆ ಮೊದಲಾದವರಿದ್ದರು.







