ಸ್ವ ಸಹಾಯ ಸಂಘಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ: ವಿಜಯ್ ಕುಮಾರ್

ಹನೂರು, ಸೆ.23: ತಾಲೂಕಿನ ಸ್ಪಂದನ ಸಮುದಾಯ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ 9ನೆ ವಾರ್ಷಿಕೋತ್ಸವ ಶನಿವಾರ ನಡೆಯಿತು.
ಈ ವೇಳೆ ಮೈರಾಡ ಕಾರ್ಯಕ್ರಮಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಸ್ವ ಸಹಾಯ ಸಂಘಗಳು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುಬೇಕೆಂದು ಸಲಹೆ ನೀಡಿದರು.
ಸ್ವ ಸಹಾಯ ಸಂಘಗಳು ಕೇವಲ ಸಾಲ ಪಡೆಯುವ ಅಥವಾ ಉಳಿತಾಯ ಮಾಡುವುದಷ್ಟೇ ಅಲ್ಲ, ಸಾಮಾಜಿಕವಾಗಿಯೂ ನಿಮ್ಮ ಜವಾಬ್ದಾರಿಗಳಿವೆ ಎಂದರು.
ಜೇನುಗೂಡು ಸಮುದಾಯ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಕಾರ್ಯದರ್ಶಿ ಮಹೇಂದ್ರ ವಾರ್ಷಿಕ ವರದಿ ಓದುತ್ತಾ, ಸಂಸ್ಥೆಗೆ 135 ಸ್ವ ಸಹಾಯ ಸಂಘಗಳ ಸದಸ್ಯತ್ವ ಮತ್ತು 6 ಸ್ವ ಸಹಾಯ ಒಕ್ಕೂಟಗಳನ್ನು ಹೊಂದಿದೆ. ಕಳೆದ ವರ್ಷ ಸಂಸ್ಥೆಯ ಸಮುದಾಯಕ್ಕೆ ಹಲವಾರು ಸೇವೆಗಳನ್ನು ನೀಡುವುದರ ಮುಖಾಂತರ 6,63,078 ರೂ. ಆದಾಯ, ಖರ್ಚು 8,35,659 ರೂ.ಗಳಾಗಿದ್ದು 1,72,581 ರೂ. ನಷ್ಟದಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ನಾಗರಾಜು, ಸುರೇಶ್ ಕುಮಾರ್, ಅಬ್ದುಲ್ ಗಫ್ಫಾರ್, ಮಂಜುನಾಥ್, ಪುಟ್ಟಬಸಪ್ಪ, ಮತ್ತು ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.





