ನಗರ ಸ್ಮಾರ್ಟ್ ಆದಂತೆ ಪೌರ ಕಾರ್ಮಿಕರು ಸ್ಮಾರ್ಟ್ ಆಗಬೇಕು: ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಸೆ.23: ದಾವಣಗೆರೆ ನಗರವು ಸ್ಮಾರ್ಟ್ ಆದಂತೆ ಪೌರ ಕಾರ್ಮಿಕರು ಸ್ಮಾರ್ಟ್ ಆಗಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದ ಚೌಕಿಪೇಟೆಯಲ್ಲಿನ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿನ ಸಮುದಾಯ ಭವನದಲ್ಲಿ ಶನಿವಾರ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕೇವಲ 4 ರಿಂದ 5 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಇದೀಗ 25 ಸಾವಿರ ರೂ. ವೇತನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂಳಿದ ಪೌರ ಕಾರ್ಮಿಕರನ್ನು ಸಹ ಸರ್ಕಾರ ಖಾಯಂಗೊಳಿಸಲಿದೆ ಎಂದು ಭರವಸೆ ನೀಡಿದರು.
ಹೊರ ದೇಶದಲ್ಲಿನ ಸ್ವಚ್ಛತಾ ಕಾರ್ಯದ ಬಗ್ಗೆ ನಗರ ಪೌರ ಕಾರ್ಮಿಕರಿಗೆ ಅರಿವು ಮೂಡಿಸಲು ಅಧ್ಯಾಯನಕ್ಕಾಗಿ ಪ್ರವಾಸಕ್ಕೆ ಕಳುಹಿಸಲು ಸರ್ಕಾರ ಚಿಂತಿಸಿದೆ. ಅಲ್ಲಿನ ಸ್ವಚ್ಛತಾ ಕಾರ್ಯದಂತೆ ನಗರದಲ್ಲೂ ಕೈಗೊಳ್ಳಲಾಗುವುದು. ಖಾಯಂ ಪೌರ ನೌಕರರಿಗೆ 1 ಪ್ಲಸ್ 1 ಮಾದರಿಯ ಮನೆಗಳನ್ನು ನಿರ್ಮಿಸಿಕೊಡಲು ಕೂಡ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಗುತ್ತಿಗೆ ಪೌರ ಕಾರ್ಮಿಕರ ಸಂಘದ ಎಲ್.ಎಂ. ಹನುಮಂತಪ್ಪ ಮಾತನಾಡಿ, ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ಇಎಸ್‍ಐ ಸೌಲಭ್ಯವನ್ನು ಒದಗಿಸಬೇಕು. ಹಿಂದಿನಿಂದಲೂ ಪೌರ ಕಾರ್ಮಿಕರ ಭವನ ನಿರ್ಮಿಸುವಂತೆ ಒತ್ತಾಯಿಸಿದ್ದರು ಸಹ ಯಾವುದೇ ಪ್ರಯೋಜವಾಗಿಲ್ಲ. ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಈ ವೇಳೆ ಪೌರ ಕಾರ್ಮಿಕರು ಹಾಗೂ ಪಾಲಿಕೆ ನೌಕರರ ಸಂಘದ ವತಿಯಿಂದ ಶಾಮನೂರು ಶಿವಶಂಕರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್ ಜಾಧವ್, ಉಪಮೇಯರ್ ಮಂಜಮ್ಮ ಹನುಮಂತಪ್ಪ, ಪಾಲಿಕೆ ಸದಸ್ಯೆ ಆಶ್ವಿನಿ ಪ್ರಶಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ಶ್ರೀನಿವಾಸ್, ಎಸ್. ಬಸಪ್ಪ, ಜಿ.ಬಿ. ಲಿಂಗರಾಜ್, ದಿಲ್‍ಷಾದ್ ಬೇಕೇಜ್ ಅಹ್ಮದ್, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ಪಾಲಿಕೆ ಸದಸ್ಯ ಎಂ.ಹಾಲೇಶ್, ಎಲ್.ಡಿ.ಗೋಣೆಪ್ಪ, ಎನ್. ನೀಲಗಿರಿಯಪ್ಪ, ದಿನೇಶ್ ಶೆಟ್ಟಿ, ಮಾಜಿ ಉಪಮೇಯರ್ ರಾಜಶೇಖರ್ ಗೌಡ್ರು, ಕೆ.ಎಸ್. ಗೋವಿಂದರಾಜ್, ರವೀಂದ್ರ ಮಲ್ಲಾಪುರ, ಜಯರಾಂ, ಬಿ.ಎಂ. ಅಶ್ವಿನಿ ಇದ್ದರು.







