ಪರವಾನಿಗೆ ಪಡೆಯದ ಬಸ್ ಗಳಿಗೆ ಶಿಸ್ತು ಕ್ರಮ: ಸಾರಿಗೆ ಸಚಿವ ರೇವಣ್ಣ

ತುಮಕೂರು, ಸೆ.23: ಖಾಸಗಿಯವರು ಬಸ್ ಗಳಿಗೆ “ಸಿಸಿ”(ಕ್ಯಾಜ್ಯುಯಲ್ ಕಾಂಟ್ರಾಕ್ಟ್) ಪರ್ಮಿಟ್ ಪಡೆದು ಆನ್‍ಲೈನ್‍ನಲ್ಲಿ ಸೀಟುಗಳನ್ನು ಬುಕ್ ಮಾಡಿ ಪ್ರಯಾಣಿಕರನ್ನು ಸಾಗಾಟ ಮಾಡುವ ವ್ಯವಸ್ಥೆ ಅಕ್ರಮವಾಗಿ ರಾಜ್ಯದಲ್ಲಿ ನಡೆಯುತ್ತಿರುವುದನ್ನು ನಿಯಂತ್ರಿಸಲಾಗುವುದು ಎಂದು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಬಸ್ಸು ನಿಲ್ದಾಣವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಖಾಸಗಿಯವರು “ಸಿಸಿ” ಪರ್ಮಿಟ್‍ನ್ನು ಸಾರಿಗೆ ಇಲಾಖೆಯಿಂದ ಪಡೆದು ಆನ್ ಲೈನ್‍ನಲ್ಲಿ ಪ್ರಯಾಣಿಕರ ಸೀಟುಗಳನ್ನು ಬುಕ್ ಮಾಡಿಕೊಂಡು ಬಸ್ ಗಳನ್ನು ಅಕ್ರಮವಾಗಿ ಓಡಿಸುತ್ತಿದ್ದಾರೆ. ಇಂತಹ ಅಕ್ರಮ ವ್ಯವಸ್ಥೆ ಇರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದು ಅವರು ತಿಳಿಸಿದರು.
“ಬಸ್ ಪೋರ್ಟ್” ನಿಲ್ದಾಣಗಳ ನಿರ್ಮಾಣ: ನಗರಗಳಲ್ಲಿರುವ ಮಾಲ್‍ಗಳಲ್ಲಿನ ಸೌಲಭ್ಯಗಳನ್ನು ಒಳಗೊಂಡಂತೆ “ಬಸ್ ಪೋರ್ಟ್” ಪರಿಕಲ್ಪನೆಯಲ್ಲಿ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬಿಎಂಟಿಸಿಯ ವತಿಯಿಂದ ‘ಬಸ್ಸು ಪೋರ್ಟ್” ನಿರ್ಮಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತುಮಕೂರು ನಗರವು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದರಿಂದ ಈ ಬಸ್ ನಿಲ್ದಾಣವು ಮೇಲ್ದರ್ಜೆಗೆರಲಿದೆ.ಅಲ್ಲದೆ ಸದ್ಯ ಬಸ್ಸು ನಿಲ್ದಾಣದಲ್ಲಿ ವಾಹನ ದಟ್ಟಣೆ ಇರುವುದರಿಂದ ನಗರ ಸಾರಿಗೆಗೆ ಈಗಿರುವ ಬಸ್ಸು ಡಿಪೋದ ಸ್ಥಳದಲ್ಲಿಯೇ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳ ಬಳಿ ಖುದ್ದು ಸಚಿವರು ತೆರಳಿ ಸಮಸ್ಯೆಗಳನ್ನು ಆಲಿಸಿದರು. ಕಾಲೇಜು ವಿದ್ಯಾರ್ಥಿಗಳಿಂದ ಮನವಿಯನ್ನು ಸ್ವೀಕರಿಸಿದರು ಹಾಗೂ ನಿಲ್ದಾಣದಲ್ಲಿ ಶೌಚಾಲಯ ಸೇರಿಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಸೇರಿದಂತೆ ಕೆಎಸ್‍ಆರ್‍ಟಿಸಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.







