ಮರು ವಿಚಾರಣೆ ನಡೆಸಲು ಕೆಳ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ
ದಂಡುಪಾಳ್ಯದ ಐವರು ಸದಸ್ಯರ ವಿರುದ್ಧದ ಜೋಡಿ ಕೊಲೆ ಪ್ರಕರಣ

ಬೆಂಗಳೂರು, ಸೆ.24: ಮಂಗಳೂರಿನಲ್ಲಿ 20 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಹಾಗೂ ದರೋಡೆ ಪ್ರಕರಣದ ಸಂಬಂಧ ದಂಡು ಪಾಳ್ಯ ಹಂತಕರ ತಂಡದ ಐವರು ಸದಸ್ಯರ ವಿರುದ್ಧದ ಪ್ರಕರಣದ ಬಗ್ಗೆ ಮರು ವಿಚಾರಣೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸುವಂತೆ ಕೋರಿ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಕ್ರಿಮಿನಲ್ ರೆಫರ್ಡ್ ಕೇಸ್ ಹಾಗೂ ಶಿಕ್ಷೆ ರದ್ದು ಕೋರಿ ಆಪರಾಧಿಗಳಾದ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ, ನಲ್ಲತಿಮ್ಮ ಹಾಗೂ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ್ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ, ಪ್ರಕರಣವನ್ನು ಅಧೀನ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ.
ಐಪಿಸಿ ಸೆಕ್ಷನ್ 313ರ ಅಡಿಯಲ್ಲಿ ಹೇಳಿಕೆ ಪಡೆದುಕೊಳ್ಳುವಾಗ ಲೋಪವಾಗಿದ್ದು, ಅಧೀನ ನ್ಯಾಯಾಲಯವು ಸೂಕ್ತ ರೀತಿಯಲ್ಲಿ ಪ್ರಶ್ನೆಗಳನ್ನು ರಚಿಸಿಲ್ಲ. ಹೀಗಾಗಿ ಪ್ರಕರಣದ ಮರು ವಿಚಾರಣೆ ನಡೆಸಿ, ಮತ್ತೊಮ್ಮೆ ಹೇಳಿಕೆಗಳನ್ನು ಪಡೆದು ತೀರ್ಪು ಪ್ರಕಟಿಸುವಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು: 1997ರ ಅ.12ರಂದು ಮಂಗಳೂರಿನ ಊರ್ವ ಮಾರಿಗುಡಿ ಪ್ರದೇಶದಲ್ಲಿ ವೃದ್ಧೆ ಲೂಸಿಯಾ ಡಿ ಮೆಲ್ಲೋ ಹಾಗೂ ರಂಜಿತ್ ವೇಗಸ್ ಎಂಬವರನ್ನು ಕತ್ತು ಸೀಳಿ ಕೊಂದು ದರೋಡೆ ಮಾಡಲಾಗಿತ್ತು. ಪ್ರಕರಣದ ಸಂಬಂಧ ದಂಡುಪಾಳ್ಯ ತಂಡದ ಐವರು ಸದಸ್ಯರನ್ನು ಬಂಧಿಸಿದ್ದ ಪೊಲೀಸರು, ಎಲ್ಲರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯ 2012ರಲ್ಲಿ ಐವರಿಗೂ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.







