ಕಾಶ್ಮೀರದ ಚಿತ್ರಗ್ರಾಹಕನ ಮುಡಿಗೇರಿದ ಇಯಾನ್ ಪ್ಯಾರಿ ಸ್ಕಾಲರ್‌ಷಿಪ್ ಪ್ರಶಸ್ತಿ

ಶ್ರೀನಗರ,ಸೆ.24: ಶ್ರೀನಗರದ ಫೋಟೊ ಜರ್ನಲಿಸ್ಟ್ ಶರಾಫತ್ ಅಲಿ(23) ಅವರು ತನ್ನ ಚಿತ್ರಗಳಿಗಾಗಿ ಪ್ರತಿಷ್ಠಿತ ಇಯಾನ್ ಪ್ಯಾರಿ ಸ್ಕಾಲರ್‌ಷಿಪ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಕಾಶ್ಮೀರವು ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡಿದ್ದಾರೆ.
2013ರಲ್ಲಿ ಮೊದಲ ಬಾರಿಗೆ ಕ್ಯಾಮೆರಾವನ್ನು ಕೈಗೆತ್ತಿಕೊಂಡಿದ್ದ ಅಲಿ ಅವರ ಆಸಕ್ತಿಯನ್ನು ಪೋಷಿಸಿದ ಕಾಶ್ಮೀರದ ಡಾಕ್ಯುಮೆಂಟರಿ ಫೋಟೊಗ್ರಾಫರ್ ಶೌಕತ್ ನಂದಾ ಅವರನ್ನು ವೃತ್ತಿಪರ ಫೋಟೊಗ್ರಾಫರ್ ಆಗಿ ತರಬೇತುಗೊಳಿಸಿದ್ದರು.
‘ನಾನು ಯಾರು-ಅನಿಶ್ಚಿತ ಅನನ್ಯತೆ’ ಎಂಬ ತನ್ನ ಛಾಯಾಚಿತ್ರಗಳ ಸಂಗ್ರಹಕ್ಕಾಗಿ ಅಲಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
‘‘ಕಾಶ್ಮೀರವನ್ನು ಹೆಚ್ಚಿನವರು ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಾದೇಶಿಕ ಬಿಕ್ಕಟ್ಟು ಎಂದು ಪರಿಗಣಿಸಿದ್ದಾರೆ. ಆದರೆ ಕಳೆದ 28 ವರ್ಷಗಳ ಸಂಘರ್ಷಗಳು ಮಾನವೀಯತೆ ಯು ಬಹು ದುಬಾರಿ ಬೆಲೆ ತೆರುವಂತೆ ಮಾಡಿವೆ. ಸಾವಿರಾರು ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಅನಾಥರಾಗಿದ್ದಾರೆ. ಸುಮಾರು 8000 ಜನರು ನಾಪತ್ತೆಯಾಗಿದ್ದಾರೆ. ಅಲಿ ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರವು ಸಂಘರ್ಷದ 28 ವರ್ಷಗಳಲ್ಲಿಯೇ ಅತ್ಯಂತ ಮಾರಣಾಂತಿಕ ಭಾರತ ವಿರೋಧಿ ಪ್ರತಿಭಟನೆಗೆ ಸಾಕ್ಷಿ ಯಾಗಿತ್ತು. 2016ರ ವರ್ಷವೊಂದರಲ್ಲೇ 100ಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯ ದವರು ಸಾವನ್ನಪ್ಪಿದ್ದಾರೆ. ಅಲಿಯವರ ಕೆಲಸವು ಸಂಘರ್ಷ, ರಾಜಕೀಯ, ನಂಬಿಕೆ ಮತ್ತು ಪ್ರದೇಶದಲ್ಲಿನ ದೈನಂದಿನ ಜೀವನಕ್ಕೆ ಸಂಬಂಧಿಸಿದೆ’’ ಎಂದು ಪ್ಯಾರಿ ಪ್ರತಿಷ್ಠಾನವು ತನ್ನ ಜಾಲತಾಣದಲ್ಲಿ ಹೇಳಿದೆ.
ಹಿಂಸಾಚಾರವನ್ನು ಬಿಟ್ಟು ಕಾಶ್ಮೀರದ ಕೆಲವು ಅತ್ಯಂತ ಮಹತ್ವದ ಘಟನೆಗಳನ್ನು, ಬದುಕನ್ನು ತನ್ನ ಚಿತ್ರಗಳ ಮೂಲಕ ಹೊರಜಗತ್ತಿಗೆ ತೋರಿಸಲು ಅಲಿ ನಿರ್ಧರಿಸಿದ್ದಾರೆ.
ಫೋಟೊ ಜರ್ನಲಿಸ್ಟ್ ಆಗಿದ್ದ ಇಯಾನ್ ಪ್ಯಾರಿ 1989ರಲ್ಲಿ ‘ದಿ ಸಂಡೆ ಟೈಮ್ಸ್’ಗಾಗಿ ರೊಮಾನಿಯಾ ಕ್ರಾಂತಿಯ ವರದಿ ಮಾಡುತ್ತಿದ್ದಾಗ ಸಾವನ್ನಪ್ಪಿದ್ದರು. ಆಗ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಅವರ ಸ್ಮರಣಾರ್ಥ ಪ್ರತಿ ವರ್ಷ ಯುವ ಚಿತ್ರಗ್ರಾಹಕರಿಗಾಗಿ ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಏರ್ಪಡಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.







