ಮೊದಲ ಕಿಕ್ ಬಾಕ್ಸಿಂಗ್ ಪಂದ್ಯದ ನಂತರ ಮೃತಪಟ್ಟ ಭಾರತೀಯ ಮೂಲದ ದೇಹದಾರ್ಢ್ಯಪಟು

ಸಿಂಗಾಪುರ, ಸೆ.24: ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಮೊದಲ ಪ್ರದರ್ಶನ ನೀಡಿದ ನಂತರ ಹೃದಯಾಘಾತಕ್ಕೊಳಗಾಗಿ ಭಾರತೀಯ ಮೂಲದ ದೇಹದಾರ್ಢ್ಯಪಟುವೊಬ್ಬರು ಮೃತಪಟ್ಟ ಘಟನೆ ಸಿಂಗಾಪುರದಲ್ಲಿ ನಡೆದಿದೆ.
ಏಶಿಯನ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಭಾರತ ಮೂಲದ ಪ್ರದೀಪ್ ಸುಬ್ರಹ್ಮಣ್ಯನ್ ಅವರು ಸ್ಟೀವ್ ಲಿಮ್ ರೊಂದಿಗಿನ ಪಂದ್ಯದ ನಂತರ ಮೃತಪಟ್ಟಿದ್ದಾರೆ. ಸಿಂಗಾಪುರದ ವರ್ಲ್ಡ್ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಸಿಕ್ ಸ್ಪೋರ್ಟ್ಸ್ ಫೆಡರೇಶನ್ ನ ಅಧ್ಯಕ್ಷರಾಗಿದ್ದರು.
ಐದು ನಿಮಿಷಗಳ ಕಾಲ ಪಂದ್ಯ ನಡೆಯಿತು. ಈ ಸಂದರ್ಭ ಸುಬ್ರಹ್ಮಣ್ಯನ್ ರ ಮೂಗಿನಿಂದ ರಕ್ತ ಒಸರುತ್ತಿರುವುದನ್ನು ಗಮನಿಸಿದ ರೆಫರಿ ಪಂದ್ಯವನ್ನು ನಿಲ್ಲಿಸಿದರು. ಲಿಮ್ ಪಂದ್ಯವನ್ನು ಜಯಿಸಿದರು.

ಪಂದ್ಯದಲ್ಲಿ ಸುಬ್ರಹ್ಮಣ್ಯನ್ ರ ತಲೆಗೆ ಕೆಲ ಹೊಡೆತ ಬಿದ್ದಿತ್ತು. ಆದರೂ ಅವರು ಸೆಣಸಾಡಿದ್ದರು. ಆದರೆ ಕೊನೆಗೆ ಅವರು ಪ್ರಜ್ಞೆ ತಪ್ಪುವಂತೆ ರೆಫರಿಗೆ ಭಾಸವಾಗಿದೆ. ನಂತರ ಸುಬ್ರಹ್ಮಣ್ಯನ್ ರನ್ನು ಅಲ್ಲಿಂದ ಕರೆದೊಯ್ಯಲಾಯಿತು.
“ಮೊದಲ ರೌಂಡ್ ನಲ್ಲಿ ಪ್ರದೀಪ್ ಗೆಲ್ಲುವಂತೆ ಕಂಡುಬಂದರೆ. ಆದರೆ 2ನೆ ರೌಂಡ್ ನಲ್ಲಿ ಸ್ಟೀವನ್ ಕೆಲ ಪಂಚ್ ಮಾಡಿದರು. ಕೇವಲ ಪ್ರಜ್ಞೆ ತಪ್ಪಿರುವುದು ಎಂದು ನಾವು ಭಾವಿಸಿದ್ದೆವು. ಹೃದಯಾಘಾತಕ್ಕೊಳಗಾದ ಯಾವ ಲಕ್ಷಣವೂ ಗೋಚರಿಸಲಿಲ್ಲ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮೃತಪಟ್ಟ ಸುದ್ದಿ ನಂತರವಷ್ಟೇ ತಿಳಿದುಬಂತು” ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.







