10 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು, ಸೆ.24: ಅಭಿವೃದ್ಧಿಗಾಗಿ ಮರಗಳನ್ನು ಕಡಿದರೂ ಕೂಡ ಅದರ ಎರಡು ಪಟ್ಟು ಗಿಡಗಳನ್ನು ನೆಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಗ್ರೀನ್ ಒರೆನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ರವಿವಾರ ನಗರದ ಪಾದುವ ಪದವಿ ಕಾಲೇಜು ಸಭಾಭವನದಲ್ಲಿ ನಡೆದ ಬೃಹತ್ ಮಟ್ಟದ ಸಸಿ ನೆಡುವ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವರು ತಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಮಾಡುತ್ತಿದ್ದರೂ, ಅವುಗಳು ಮಾತ್ರ ನಮ್ಮ ಜೀವನಕ್ಕೆ ಆವಶ್ಯವಾದ ಆಮ್ಲಜನಕವನ್ನು ನೀಡುತ್ತಿದೆ. ಪ್ರಕೃತಿಯ ಈ ಗುಣಕ್ಕೆ ನಾವು ಋುಣಿಯಾಗಬೇಕಿದೆ. ಬೂತಾನ್ ದೇಶದಲ್ಲಿ ಮರಗಿಡಗಳನ್ನು ನೆಡುವ ವಿಚಾರದಲ್ಲಿ ನೀತಿಯೊಂದು ಜಾರಿಗೆ ಬಂದಿದೆ. ಅಂತಹ ನೀತಿಯು ಭಾರತದಲ್ಲೂ ಜಾರಿಗೆ ಬರುವ ಅಗತ್ಯವಿದೆ ಎಂದು ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಆರ್‌ಎಫ್ಒ ಶ್ರೀಧರ್ ಪಿ. ಗ್ರೀನ್ ಒರೆನ್ ಚಾರಿಟೇಬಲ್ ಟ್ರಸ್ಟ್‌ನ ವೆಬ್‌ಸೈಟ್ ಅನಾವರಣ ಮಾಡಿದರು. ಸಸ್ಯ ಜೀವ ವೈವಿಧ್ಯ ಪಶ್ಚಿಮ ಘಟ್ಟ ಕುರಿತು ವಿಟ್ಲ ಸಸ್ಯ ಶ್ಯಾಮಲದ ದಿನೇಶ್ ನಾಯಕ್ ಮಾಹಿತಿ ನೀಡಿದರು.
ಕಾರ್ಪೊರೇಟರ್ ರೂಪಾ ಡಿ. ಬಂಗೇರಾ, ಶ್ರೀಕರ ಪ್ರಭು, ನ್ಯಾಯವಾದಿ ರಾಜೇಶ್ ಕುಮಾರ್ ಅಮ್ಟಾಡಿ, ಜೋಯೆಲ್ ಆರ್. ಸಲ್ಡಾನಾ, ಲೂರ್ಡ್ಸ್ ಸ್ವಾಮಿ ಮೈಸೂರು, ಗ್ರೀನ್ ಒರೊನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರಂಜಿತ್ ಮರೋಳಿ, ಕಾರ್ಯದರ್ಶಿ ಮನೋಜ್ ಬಂಗೇರಾ ಉಳ್ಳಾಲ ಉಪಸ್ಥಿತರಿದ್ದರು.
ಪ್ರವೀಣ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.
10 ಸಾವಿರ ಗಿಡ ನೆಡುವ ಯೋಜನೆ: ಸುರತ್ಕಲ್‌ನಿಂದ ಬಿ.ಸಿ.ರೋಡ್ ತನಕ ಸುಮಾರು 10 ಸಾವಿರ ಗಿಡ ನೆಡುವ ಯೋಜನೆ ಇದಾಗಿದೆ. ಆ ಮೂಲಕ ‘ಹಸಿರು ಕ್ರಾಂತಿ’ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. 50 ಮಂದಿ ಯುವಕರನ್ನು ಒಳಗೊಂಡು 3 ತಿಂಗಳ ಹಿಂದೆ ಸ್ಥಾಪನೆಗೊಂಡ ಗ್ರೀನ್ ಒರೆನ್ ಚಾರಿಟೇಬಲ್ ಟ್ರಸ್ಟ್ ಈ ಮಹತ್ಕಾರ್ಯಕ್ಕೆ ಮುಂದಾಗಿದೆ.







