ಖಾಸಗಿ ಏಜೆನ್ಸಿಗಳ ಮೇಲೆ ನಿಗಾ ಇರಿಸಿ: ಡಿಜಿಪಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ
ವಿದೇಶಗಳಲ್ಲಿ ಉದ್ಯೋಗದ ನೆಪದಲ್ಲಿ ವಂಚನೆ

ಬೆಂಗಳೂರು, ಸೆ. 24: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ಖಾಸಗಿ ಸಂಸ್ಥೆಗಳ ಮೇಲೆ ಸೂಕ್ತ ನಿಗಾ ವಹಿಸಬೇಕು. ಅಲ್ಲದೆ, ಜನರನ್ನು ವಂಚಿಸುವ ಏಜೆನ್ಸಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ, ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಖಾಸಗಿ ಏಜೆನ್ಸಿಯೊಂದು ಉಡುಪಿಯ ಜೆಸಿಂತಾ ಅವರನ್ನು ಶ್ರೀಮಂತರಿಗೆ ಮಾರಾಟ ಮಾಡಿದಂತಹ ಪ್ರಕರಣಗಳು ಪುನಾರಾವರ್ತನೆ ಆಗಬಾರದು ಎಂದು ನಿರ್ದೇಶನ ನೀಡಿದರು.
ನಿರುದ್ಯೋಗಿಗಳಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಖಾಸಗಿ ಏಜೆನ್ಸಿಗಳು ಅಮಾಯಕರಿಗೆ ವಂಚನೆ ಮಾಡುವುದು ಸರಿಯಲ್ಲ. ಹೀಗಾಗಿ ಅಂತಹ ಏಜೆನ್ಸಿಗಳ ಮೇಲೆ ನಿಗಾ ಇರಿಸಬೇಕು. ಅಲ್ಲದೆ, ವಂಚನೆ ಪ್ರಕರಣಗಳ ಗಮನಕ್ಕೆ ಬಂದರೆ ಕೂಡಲೇ ಆ ಏಜೆನ್ಸಿಗಳನ್ನು ಹೊಣೆ ಮಾಡಬೇಕು ಎಂದು ಸೂಚಿಸಿದರು.
ಉಡುಪಿಯ ಜೆಸಿಂತಾ ಎಂಬ ಮಹಿಳೆ ಕ್ಷಯರೋಗದಿಂದ ಬಳಲುತ್ತಿದ್ದು, ತನ್ನ ಪತಿಯನ್ನು ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ತನ್ನ ಮೂರು ಮಕ್ಕಳನ್ನು ಸಾಕಲು ಉದ್ಯೋಗ ಅರಸತೊಡಗಿದರು. ಈ ವೇಳೆ ಮುಂಬೈನ ಏಜೆನ್ಸಿಯೊಂದು ಕತ್ತಾರ್‌ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸಿದೆ. ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯನ್ನು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಕೇಂದ್ರ ಸರಕಾರದ ನೆರವಿನಿಂದ ರಕ್ಷಿಸಲಾಗಿದೆ. ಹೀಗಾಗಿ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಬೇಕು. ಸಾರ್ವಜನಿಕರೂ ವಿದೇಶಗಳಲ್ಲಿ ಉದ್ಯೋಗದ ಆಸೆಗೆ ಬಲಿಬೀಳುವ ಮೊದಲು ಆಲೋಚಿಸಬೇಕು. ಅಲ್ಲದೆ, ಸರಕಾರಿ ಸಂಸ್ಥೆಗಳ ಮೂಲಕವೇ ಉದ್ಯೋಗ ಅರಸಬೇಕು ಎಂದು ಸಲಹೆ ನೀಡಿದರು.







