ಮಂಗಳೂರು ವಿವಿಯಲ್ಲಿ ಬ್ಯಾಂಕಿಂಗ್ ವಿಭಾಗ ತೆರೆಯಲು ಚಿಂತನೆ: ಮೊಯ್ಲಿ
ಮಂಗಳೂರು, ಸೆ.24: ಮಂಗಳೂರು ವಿವಿಯಲ್ಲಿ ಮುಂದಿನ ದಿನಗಳಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಬ್ಯಾಂಕಿಂಗ್ ವಿಭಾಗವನ್ನು ತೆರೆಯಲು ಚಿಂತನೆ ನಡೆಸುತ್ತಿದ್ದೇವೆ ಎಂದು ಮಾಜಿ ಕೇಂದ್ರ ಸಚಿವ ಡಾ.ಎಂ. ವೀರ್ಪಪ್ಪ ಮೋಯ್ಲಿ ಹೇಳಿದರು.
ಮಂಗಳೂರು ವಿ.ವಿ. ಕಾಲೇಜಿನಲ್ಲಿ ರವಿವಾರ ನಡೆದ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಳೆವಿದ್ಯಾರ್ಥಿಗಳು ವಿದ್ಯಾಸಂಸ್ಥೆಗಳ ಬಗ್ಗೆ ಪ್ರೀತಿ ತೋರಿಸದಿದ್ದರೆ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳೂರು ವಿ.ವಿ. ಕಾಲೇಜಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಮುಂದಿನ ಅಭಿವೃದ್ಧಿ ಯೋಜನೆಯ ಬಗ್ಗೆ ರೂಪುರೇಷ ಹಾಕಿಕೊಳ್ಳಲಾಗುವುದು ಎಂದು ವೀರಪ್ಲ ಮೊಯ್ಲಿ ಹೇಳಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ವಿದ್ಯಾಬ್ಯಾಸ ಕೊನೆಗೊಂಡ ಬಳಿಕ ಪ್ರತಿಯೊಬ್ಬರನ್ನೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರನ್ನಾಗಿ ಮಾಡಬೇಕು. ಆಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಮಂಗಳೂರು ವಿವಿ ಕಾಲೇಜಿಗೆ 150 ವರ್ಷ ತುಂಬುತ್ತಿದ್ದು, ಇಲ್ಲಿಯವರೆಗಿನ ಹಳೆ ವಿದ್ಯಾರ್ಥಿಗಳು ಎಲ್ಲಿದ್ದಾರೆ, ಏನೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಮಹಾಸಭೆಯಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಣ್ಣ, ಕಾರ್ಯದರ್ಶಿ ಸಮಿತಿ ಉಪಾಧ್ಯಕ್ಷ ಶರತ್ ಭಂಡಾರಿ, ಗಣೇಶ್, ಖಜಾಂಚಿ ರಾಮಮೋಹನ್ ರೈ ಮತ್ತಿತರ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







