ಮಣ್ಣಿನ ರಸ್ತೆಯೇ ಬೆಂಚು, ಬೀದಿಯಲ್ಲೇ ತರಗತಿ!
ಇದನ್ನು ಶಾಲೆ ಎಂದರೆ ನೀವು ನಂಬಲೇಬೇಕು..

ಮಧ್ಯಪ್ರದೇಶ, ಸೆ.24: ಆರ್ ಟಿಒ ಕಚೇರಿಯ ಹಿಂದೆ ಇರುವ ಮಣ್ಣಿನ ರಸ್ತೆಯ ಬದಿಯಲ್ಲಿ ಸಾಲಾಗಿ ಮಕ್ಕಳು ಕುಳಿತಿದ್ದಾರೆ. ಅವರ ಸಮೀಪದಿಂದಲೇ ನೂರಾರು ವಾಹನಗಳು ಸಾಗುತ್ತವೆ. ಬೀದಿನಾಯಿಗಳೂ ಮಕ್ಕಳನ್ನು ನೋಡಿ ಬೊಗಳುತ್ತವೆ. ಹೌದು ಇದು ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯಲ್ಲಿರುವ ಸರಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ!.
ಸರಕಾರದಿಂದ ಮಂಜೂರಾಗಿದ್ದ ಶಾಲೆಯೊಂದರ ವಿದ್ಯಾರ್ಥಿಗಳಿವರು. ಆದರೆ ಆಡಳಿತದ ವೈಫಲ್ಯವು ಈ ಮಕ್ಕಳಿಗೆ ಕಟ್ಟಡವೊಂದನ್ನು ನಿರ್ಮಿಸಲಾಗದಷ್ಟು ಕೆಟ್ಟು ಹೋಗಿದೆ. ರಸ್ತೆಬದಿಯಲ್ಲಿ ಈ ಮಕ್ಕಳು ಕುಳಿತುಕೊಳ್ಳಬೇಕು. ಬಾಡಿಗೆ ಕೋಣೆಯೊಂದರಲ್ಲಿ ಇಷ್ಟು ದಿನಗಳ ಕಾಲ ತರಗತಿ ನಡೆಸಲಾಗುತ್ತಿತ್ತು. ಆದರೆ ಬೇಸಿಗೆ ಬೇಗೆ ತಾಳಲಾಗದೆ ಮಕ್ಕಳು ರಸ್ತೆ ಬದಿಯಲ್ಲಿ ಕುಳಿತುಕೊಂಡು ಪಾಠ ಕೇಳುತ್ತಿದ್ದಾರೆ.

“41 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಈ ಪ್ರಾಥಮಿಕ ಶಾಲೆಯಲ್ಲಿದ್ದಾರೆ. ಶಾಲೆಗೆ ಸ್ವಂತ ಕಟ್ಟಡವಿಲ್ಲ. ಎಲ್ಲಿ ನಮಗೆ ಸ್ಥಳ ಸಿಗುತ್ತದೋ ಅಲ್ಲಿ ತರಗತಿ ನಡೆಸುತ್ತೇವೆ” ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ ಸುಖ್ ಲಾಲ್ ಪಾಠಕ್.
ವೇಗವಾಗಿ ವಾಹನಗಳು ರಸ್ತೆಯಲ್ಲಿ ತೆರಳುವಾಗ ಭಯವಾಗುತ್ತದೆ ಎನ್ನುತ್ತಾರೆ 4ನೆ ತರಗತಿಯ ವಿದ್ಯಾರ್ಥಿನಿ ಆಶಾ.







