ವೈಯಕ್ತಿಕ ಹಿತಾಸಕ್ತಿಗಾಗಿ ಅಧಿಕಾರ ದುರ್ಬಳಕೆ: ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು, ಸೆ. 24: ವೈಯಕ್ತಿಕ ಹಿತಾಸಕ್ತಿಗಾಗಿ ಕೇಂದ್ರದ ಅಧಿಕಾರದಲ್ಲಿರುವ ಕೆಲವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಕುರಿತು ಕ್ರೈಸ್ತ ಸಮುದಾಯ ಎಚ್ಚರಿಕೆಯಿಂದ ಇರಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ನಗರದ ಹಡ್ಸನ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹಡ್ಸನ್ ದೇವಾಲಯದ 113 ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ನೆಹರು, ಇಂದಿರಾ ಗಾಂಧಿ ಸೇರಿದಂತೆ ಅನೇಕರು ದೇಶದ ಅಭಿವೃದ್ಧಿಗಾಗಿ ಹಲವಾರು ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು.
ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇಶಕ್ಕಾಗಿ ತಕ್ಕಮಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರದ ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರತ್ಯಕ್ಷವಾಗಿ ನಾವು ನೋಡುತ್ತಿದ್ದೇವೆ. ಸಚಿವರಾದ ಮೇಲೆ ಎಲ್ಲ ರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಆಧಾರ ರಹಿತ ಟೀಕೆಗಳು ಸಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅತ್ಯುತ್ತಮವಾದ ಆಡಳಿತ ನೀಡುತ್ತಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅದೇ ರೀತಿ ಪೌರ ಕಾರ್ಮಿಕರಿಗೆ ಹುದ್ದೆ ಖಾಯಂ ಮಾಡಿ, ಉತ್ತಮ ವೇತನ ಕಲ್ಪಿಸಲಾಗಿದೆ. ಬೆಂಗಳೂರಿನಲ್ಲಿ ಸುರಿದ ದಾಖಲೆ ಮಳೆಯಿಂದಾಗಿ ಕೆಲವು ಸಮಸ್ಯೆಗಳಾಗಿರುವುದು ಸತ್ಯ. ಆದರೆ, ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಉಲ್ಬಣಗೊಂಡಿರುವ ಕಸದ ಸಮಸ್ಯೆ ಪರಿಹಾರಕ್ಕಾಗಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅನಗತ್ಯವಾಗಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್‌ನ ಫಾದರ್ ಥಾಮಸ್, ಫಾದರ್ ದಿನಕರ್, ಸತೀಶ್, ವಿಜಯ ಕುಮಾರ್, ಸುಭಾಷ್, ಮನೋಹರ್ ದಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







