ದಲಿತ ದೌರ್ಜನ್ಯ ನಡೆದರೆ ಸಮಾಜ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಿ: ಡಾ. ವೇದಮೂರ್ತಿ
ಮಾಸಿಕ ಎಸ್ಸಿ-ಎಸ್ಟಿ ಸಭೆ
ಮಂಗಳೂರು, ಸೆ.24: ದೌರ್ಜನ್ಯ ಪ್ರಕರಣಗಳು ನಡೆದಾಗ ಪೊಲೀಸರಿಗೆ ದೂರು ನೀಡುವುದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಬೇಕು. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 1ಲಕ್ಷದಿಂದ 8.25 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ. ಸೆಕ್ಷನ್‌ಗಳನ್ನು ಸರಿಯಾಗಿ ಹಾಕಿದರೆ ಮಾತ್ರ ಮೊತ್ತ ಬೇಗ ದೊರೆಯುತ್ತದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‌ಪಿ ಡಾ. ವೇದಮೂರ್ತಿ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಲಿತ ದೌರ್ಜನ್ಯ ಪ್ರಕರಣಗಳು ನಡೆದಾಗ ಎಸ್ಸಿ-ಎಸ್ಟಿ ಕಾಯ್ದೆ 3-1(1-13)ರ ಬದಲಾಗಿ, ಇನ್ಮುಂದೆ ಎಸ್ಸಿ-ಎಸ್ಟಿ ಕಾಯ್ದೆ 3-1(ಎ-ಜೆಡ್)ನ್ನು ಪ್ರಯೋಗಿಸಲಾಗುತ್ತದೆ. ಸುಳ್ಳು ಪಜಾ, ಪಪಂ ಜಾತಿ ಪ್ರಮಾಣ ಪತ್ರ ಪಡೆದಿರುವ ಕುರಿತಂತೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ಮುಂದೆ 4 ಪ್ರಕರಣಗಳು ಬಾಕಿ ಇದ್ದು, ತಹಶೀಲ್ದಾರ್‌ಗೆ ತನಿಖೆ ನಡೆಸಲು ಸೂಚಿಸಲಾಗಿದೆ. 2 ಎಸ್ಟಿ ಮರಾಠಿ, ತಲಾ ಒಂದೊಂದು ಮೊಗೇರ, ಆದಿದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಿರುವ ಪ್ರಕರಗಳು ವರದಿಯಾಗಿದೆ ಎಂದು ವೇದಮೂರ್ತಿ ನುಡಿದರು.
ದಲಿತ ಮುಖಂಡ ಅಶೋಕ್ ಕೊಂಚಾಡಿ ಮಾತನಾಡಿ ಶಾಲೆಗಳ ಪಕ್ಕದಲ್ಲಿರುವ ಪ್ಲೇ ಸ್ಟೇಷನ್, ಸೈಬರ್‌ಗೆ ಮಕ್ಕಳು ಭೇಟಿ ನೀಡುತ್ತಿದ್ದು, ಅಲ್ಲಿ ಏನು ಮಾಡುತ್ತಾರೆ ಎಂದು ಯಾರಿಗೂ ತಿಳಿಯುವುದಿಲ್ಲ. ಇಂತಹ ಸೆಂಟರ್‌ಗಳ ಬಗ್ಗೆ ನಿಾವಹಿಸಬೇಕು ಎಂದು ಆಗ್ರಹಿಸಿದರು.
ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿ ಈಗಾಗಲೇ ವಿಡಿಯೊ ಸೆಂಟರ್, ಕಂಪ್ಯೂಟರ್, ಕೆಫೆಗಳಿಗೆ ಸುತ್ತೋಲೆ ಕಳುಹಿಸಿ ಗ್ರಾಹಕರ ಕುರಿತ ಮಾಹಿತಿ ಇಟುಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಇನ್ನೊಮ್ಮೆ ಇಂಟರ್‌ನೆಟ್ ಕೆಫೆ ಮಾಲಕರ ಸಭೆ ನಡೆಸಿ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗುತ್ತದೆ ಎಂದರು.
ಶಾಲೆ, ತರಗತಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂಬ ಆದೇಶವಿದ್ದರೂ, ಶಾಲೆಗಳಲ್ಲಿ ಅಳವಡಿಸಲಾಗಿಲ್ಲ. ಇತ್ತೀಚೆಗೆ ನಗರ ಹೊರವಲಯದ ಶಾಲೆಯೊಂದರಲ್ಲಿ ಶಿಕ್ಷಕಿ ಕಬ್ಬಿಣದ ಸ್ಕೇಲ್‌ನಲ್ಲಿ ಮಕ್ಕಳಿಗೆ ಹೊಡೆದಿದ್ದಾರೆ. ಆದರೆ ಶಾಲೆಯಲ್ಲಿ ಕ್ಯಾಮರಾ ಇಲ್ಲದ್ದರಿಂದ ಅದು ದಾಖಲಾಗಿಲ್ಲ. ಸಾಕ್ಷ ಪುರಾವೆ ಇಲ್ಲದೆ ಪೊಲೀಸರು ದೂರು ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಕಡ್ಡಾಯವಾಗಿ ಕ್ಯಾಮರಾ ಅಳವಡಿಸಬೇಕು ಎಂದು ಅಶೋಕ್ ಕೊಂಚಾಡಿ ಆಗ್ರಹಿಸಿದರು. ಶಾಲೆಗಳಲ್ಲಿ ಕ್ಯಾಮರಾ ಅಳವಡಿಸುವ ಕುರಿತಂತೆ ಡಿಡಿಪಿಐ, ಬಿಇಒ, ಮಕ್ಕಳ ರಕ್ಷಣಾ ಸಮಿತಿ ಮೊದಲಾದ ಸಕ್ಷಮ ಪ್ರಾಧಿಕಾರಗಳು ಕೆಲಸ ಮಾಡುತ್ತವೆ. ಸರಕಾರಿ ಶಾಲೆಗಳಲ್ಲಿ ಸರಕಾರದಿಂದ ಹಾಗೂ ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಗಳ ಕರ್ತವ್ಯವಾಗಿದೆ. ಶಾಲಾ ಆಡಳಿತ ಮಂಡಳಿಗಳಿಗೆ ಈ ಕುರಿತು ಪತ್ರ ಬರೆಯುತ್ತೇವೆ. ಸಿಸಿಟಿವಿ ಇಲ್ಲದಿರುವುದು ಪ್ರಕರಣಕ್ಕೆ ಹಿನ್ನಡೆಯಲ್ಲ ಎಂದು ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿದರು.
ಕಳೆದ ಬಾರಿ ಕಾವೂರು, ಬರ್ಕೆ ವ್ಯಾಪ್ತಿಯಲ್ಲಿ ಕೀಳು ಮಟ್ಟದ ‘ಅಜಲು ಪದ್ಧತಿ’ ಪ್ರಕರಣ ನಡೆದಿತ್ತು. ಈ ಬಾರಿ ಇಂತಹ ಪ್ರಕರಣಗಳು ನಡೆಯಂತೆ ತಡೆಯಬೇಕು. ಟ್ಯಾಬ್ಲೋಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ, ದಲಿತರ,ಕೊರಗರ ಛದ್ಮವೇಷ ಪ್ರದರ್ಶಿಸಲು ಅವಕಾಶ ನೀಡಬಾರದು ಎಂದು ದಲಿತ ಮುಖಂಡ ರಘುವೀರ್ ಸೂಟರ್‌ಪೇಟೆ ಒತ್ತಾಯಿಸಿದರು.







