ವಿಚಾರಗಳನ್ನು ಒಪ್ಪದವರು ವಿಚಾರವಂತರನ್ನು ಹತ್ಯೆ ಮಾಡುತ್ತಿದ್ದಾರೆ: ತಿಮ್ಮೇಗೌಡ
'ದೇಜಗೌ ಒಂದು ನೆನಪು’ ಕಾರ್ಯಕ್ರಮ
ಬೆಂಗಳೂರು, ಸೆ.24: ಸಮಾಜವನ್ನು ಸದಾ ಜಾಗೃತರಾನ್ನಾಗಿಡುವ ವಿಚಾರವಂತರು ಸಾಣೆ ಹಿಡಿದ ಆಯುಧಗಳಿದಂತೆ. ವಿಚಾರಗಳನ್ನು ಒಪ್ಪದವರು ವಿಚಾರವಂತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಅಖಿಲ ಭಾರತ ಕುವೆಂಪು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ‘ದೇಜಗೌ ಒಂದು ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಚಾರವಂತಿಕೆ, ತತ್ವ ಸಿದ್ಧಾಂತಗಳು ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ. ಆದರೆ ಇತ್ತೀಚಿನ ದಿನಮಾನಗಳಲ್ಲಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ವಿಚಾರಗಳನ್ನು ಒಪ್ಪದವರು ವಿಚಾರವಂತರನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಡೋಜ ದೇಜಗೌ ಬುದ್ಧಿ ಜೀವಿಗಳು. ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಜೀವನವನ್ನೇ ಮುಡುಪಾಗಿಟ್ಟಿದ್ದರು. ರಾಷ್ಟ್ರಕವಿ ಕುವೆಂಪು ಅವರ ವಿಚಾರದಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಕೊನೆಯ ದಿನಗಳವೆರಗೂ ಕುವೆಂಪು ಮಾರ್ಗದಲ್ಲೆ ನಡೆದು ಸಮಾಜಕ್ಕೆ ಮಾದರಿಯಾದರು ಎಂದು ಹೇಳಿದರು.
ದೇಶದಲ್ಲಿ ಕರ್ನಾಟಕ ಅತ್ಯಂತ ಸುರಕ್ಷಿತ ರಾಜ್ಯವಾಗಿರುವುದರಿಂದ ಬೇರೆ ರಾಜ್ಯದವರು ರಾಜ್ಯಕ್ಕೆ ಬರಲು ದುಂಬಾಲು ಬೀಳುತ್ತಿದ್ದಾರೆ. ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದೇವೆ. ಕನ್ನಡಿಗರು ಯಾವುದೇ ಕಾರಣಕ್ಕೂ, ಎಂತಹ ಕಷ್ಟದ ಸಮಯದಲ್ಲೂ ಸ್ವಾಭಿಮಾನವನ್ನು ಬಿಟ್ಟುಕೊಡಬಾರದು. ಜತೆಗೆ ಮಾತೃಭಾಷಾ ಪ್ರೇಮವನ್ನು ಪ್ರತಿಯೊಬ್ಬರು ಮೈಗೂಡಿಸಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಪ್ರದೇಶದವರಿಗೆ ಕನ್ನಡ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ. ಇಂದಿಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು, ಕೇಂದ್ರ ಸರ್ಕಾರದ ಹಲವು ಇಲಾಖೆಗಳು ಸಾಮಾನ್ಯ ಜನರಿಗೆ ಇಂದಿಗೂ ಇಂಗ್ಲಿಷ್‌ನಲ್ಲಿ ನೋಟೀಸ್ ಕೊಡುತ್ತಾರೆ. ಕನ್ನಡವೇ ಇಲ್ಲಿ ಕಡ್ಡಾಯವಾದಾಗ ಈ ಸಮಸ್ಯೆ ನಿವಾರಣೆ ಸಾಧ್ಯ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರು: ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಎಂ. ನಂಜುಂಡಸ್ವಾಮಿ, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಚ್.ಕೆ.ರಾಮು, ಸಮಾಜ ಸೇವಕ ಬಿ.ವೈ.ತಿಮ್ಮೇಗೌಡ, ಕನ್ನಡ ಪರ ಹೋರಾಟಗಾರ ರಘುನಾಥ ರೆಡ್ಡಿ, ವೈದ್ಯ ಡಾ.ಎನ್.ಎಸ್.ನಾಗೇಶ್ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಸಾಪದ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ, ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ, ವೇದಿಕೆಯ ಅಧ್ಯಕ್ಷ ಟಿ.ಸುರೇಶ್, ಪ್ರಧಾನ ಕಾರ್ಯದರ್ಶಿ ರತ್ನ ಎಚ್.ಗೌಡ ಸೇರಿದಂತೆ ಇತರರು ಇದ್ದರು.







